ದೇಶದಲ್ಲೆ ಮಾದರಿಯಾಗುವಂತೆ ಆರೋಗ್ಯ ಕೇಂದ್ರಗಳ ನಿರ್ಮಾಣ – ಸುಧಾಕರ್. Health Centers to be set up as a model throughout the country – Sudhakar
ಚಿಕ್ಕಬಳ್ಳಾಪುರ: ಮೊದಲ ಹಂತದಲ್ಲಿ ರಾಜ್ಯದಲ್ಲಿನ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಿಸುವ ಯೊಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಪೆರೇಸಂದ್ರ ಗ್ರಾಮದಲ್ಲಿ ಬುಧವಾರ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಅವರು ಶಿಲಾನ್ಯಾಸ ಮಾಡುವ ಮೂಲಕ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
25 ಸಾವಿರ ಚದರ ಅಡಿಯಲ್ಲಿ ತಲಾ ಸುಮಾರು 9 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆಯು ಗುಣಮಟ್ಟದ ಆರೋಗ್ಯ ಸೌಲಭ್ಯ ದೊರಕಲಿದ್ದು,ಈಗಿರುವ 6 ಹಾಸಿಗೆಗಳ ಬದಲಾಗಿ 12 ಹಾಸಿಗೆಗಳ ವ್ಯವಸ್ಥೆ ಇರಲಿದೆ.ಒಬ್ಬ ವೈದ್ಯರ ಬದಲಾಗಗಿ ಮೂವರು ವೈದ್ಯರು ಇರುತ್ತಾರೆ. ದಾದಿಯರು,ತಾಂತ್ರಿಕ ಸಹಾಯಕರು,ಡಿ-ದರ್ಜೆ ನೌಕರರು ಸೇರಿದಂತೆ ಈಗಿರುವ ಎಲ್ಲಾ ಹುದ್ದೆಗಳ ಸಂಖ್ಯೆಗಳು ದ್ವಿಗುಣವಾಗಲಿವೆ. ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿಯೂ ಕೇಂದ್ರದಲ್ಲೆ ಉಳಿದು ಕೊಳ್ಳಲು ವಸತಿ ಗೃಹಗಳನ್ನು ನಿರ್ಮಿಸಲಾಗುತ್ತದೆ,ಕಡ್ಡಾಯವಾಗಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ವಸತಿ ಗೃಹಗಳಲ್ಲೇ ವಾಸವಿದ್ದು ಪಾಳಿ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸಬೇಕಾಗಿರುತ್ತದೆ.ಒಟ್ಟಾರೆ ಸುಸಜ್ಜಿತ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಿ ದೇಶದಲ್ಲೇ ಮಾದರಿಯಾದ ಗುಣಮಟ್ಟದ ಆರೋಗ್ಯ ಸೇವೆ ನೀಡುವುದು ಸರ್ಕಾರದ ಆಶಯವಾಗಿದೆ ಎಂದರು.
ಸಾರ್ವಜನಿಕ ಆಸ್ಪತ್ರೆ, ಆರೋಗ್ಯ ಕೇಂದ್ರಗಳು ಹಾಗೂ ಚಿಕಿತ್ಸಾ ಕೇಂದ್ರಗಳಲ್ಲಿ ದೊರೆಯುವ ಆರೋಗ್ಯ ಸೌಲಭ್ಯಗಳ ಕುರಿತು ಅರಿವು ಅಗತ್ಯವಾಗಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು. ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಲು ಅವಕಾಶವಿದ್ದರೂ ಸಹ ವಿದ್ಯಾವಂತ ಮಹಿಳೆಯರು ಪರೀಕ್ಷೆಗೊಳಪಡಲು ಹಿಂಜರಿಯುತ್ತಿದ್ದಾರೆ. ಆದರೆ ಹಿಂಜರಿಕೆ ಬಿಟ್ಟು ಪ್ರಾರಂಭಿಕ ಹಂತದಲ್ಲೇ ರೋಗವನ್ನು ಗುರುತಿಸಿ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾಯಿಲೆ ಇರಲಿ ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಎಚ್ಚರವಹಿಸುವುದು ಅತ್ಯಂತ ಪರಿಣಾಮಕಾರಿಯಾಗಿದ್ದು, ಉತ್ತಮ ಜೀವನ ಕ್ರಮ ಮತ್ತು ಆಹಾರ ಕ್ರಮವನ್ನು ಪಾಲಿಸುವ ಮೂಲಕ ಆರೋಗ್ಯವಂತ ಜೀವನ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲೇ ರೋಗವನ್ನು ಗುರುತಿಸಲು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.