ಸರ್ವರಿಗೂ ಸಮಬಾಳು ನೀಡಿದ ಏಕೈಕ ಮುಖ್ಯಮಂತ್ರಿ ದೇವರಾಜ ಅರಸು – ಡಾ.ಕೆ. ಸುಧಾಕರ್
ದೇವನಹಳ್ಳಿ : ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಮಾತಿಗೆ ನೂರಕ್ಕೆ ನೂರರಷ್ಟು ಅರ್ಥ ನೀಡಿ ಆಡಳಿತ ನಡೆಸಿದ ಏಕೈಕ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರಾಗಿದ್ದು, ಅಂತಹ ಮಹನೀಯರಿಗೆ ಸಿಗಬೇಕಾದ ಗೌರವ ಸಿಗದಿರುವುದು ಖೇದಕರ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ದೇವನಹಳ್ಳಿಯಲ್ಲಿ ನಿರ್ಮಿಸಿರುವ ದೇವರಾಜ ಅರಸು ಭವನ ಉದ್ಘಾಟಿಸಿದ ನಂತರ ಅರಸು ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜ್ಯದ ಸಮಸ್ತ ಹಿಂದುಳಿದವರಿಗೂ ಸಮರ್ಪಕವಾಗಿ ನ್ಯಾಯ ಒದಗಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು.
ಅವರ ಪಕ್ಷವೇ ಅವರಿಗೆ ಮುಳುವಾಯಿತು
ಅವರ ಪಕ್ಷದ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಉತ್ತರದಲ್ಲಿ ಸೋತಾಗ ಚಿಕ್ಕಮಗಳೂರಿನಿಂದ ಮತ್ತೆ ರಾಜಕೀಯ ಮುಖ್ಯವಾಹಿನಿಗೆ ಬರಲು ಅರಸು ಅವರು ಶ್ರಮಿಸಿದರು. ಇಂತಹ ಅರಸು ಅವರನ್ನು ಅವರ ಪಕ್ಷ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತು. ಅವರನ್ನು ಪಕ್ಷದಿಂದಲೂ ಉಚ್ಛಾಟಿಸಿತು. ಇದು ಒಬ್ಬ ಧೀಮಂತ ನಾಯಕ ಅನುಭವಿಸಿದ ನೋವು ಎಂದರು.
ಅವರ ಜೀವನ ಚರಿತ್ರೆ ಓದಿದರೆ ಭಾವನೆಗಳಿಂದ ಕೂಡಿದ ಚರಿತ್ರೆಯಾಗಿದೆ. ರಾಜಕೀಯ ಕ್ರಾಂತಿ, ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಏಕೈಕ ಮುಖ್ಯಮಂತ್ರಿ ಅರಸು. ಆ ಕಾಲಘಟ್ಟದಲ್ಲಿ ಜಾತಿ, ರಾಜಕೀಯ, ಆರ್ಥಿಕ ಶಕ್ತಿ ಇಲ್ಲದವರನ್ನು ಶಾಸಕರು, ಸಚಿವರನ್ನಾಗಿ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು.
ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ವೀರಪ್ಪಮೊಯ್ಲಿ ಸೇರಿದಂತೆ ಅನೇಕ ನಾಯಕರನ್ನು ಬೆಳೆಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ರಾಜಕೀಯ ಕ್ರಾಂತಿ ಮಾಡಿದ ನಾಯಕ ಅರಸು. ತಾವು ಪ್ರತಿಪಾದಿಸಿದ್ದನ್ನು ಅಕ್ಷರಶಃ ಅನುಷ್ಠಾನ ಮಾಡುವ ಎದೆಗಾರಿಕೆ ತೋರಿಸಿದ ಅತ್ಯಂತ ವಿರಳ ಮುಖ್ಯಮಂತ್ರಿಗಳಲ್ಲಿ ಅರಸು ಅವರೂ ಒಬ್ಬರು. ಉಳುವವನೇ ಭೂ ಒಡೆಯ ಎಂಬ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಜಾರಿಗೊಳಿಸಿದ ಕಾಯ್ದೆಯನ್ನು ಅನೇಕ ರಾಜ್ಯಗಳು ಅನುಷ್ಠಾನ ಮಾಡದಿದ್ದರೂ, ತಮ್ಮದೇ ಸಂಪುಟದ ಸಚಿವರು ವಿರೋಧ ವ್ಯಕ್ತಪಡಿಸಿದರೂ ಎದೆಗಾರಿಕೆಯಿಂದ ಕಾಯ್ದೆ ಅನುಷ್ಠಾನ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದು ಸಚಿವರು ಸ್ಮರಿಸಿದರು.
ಹಿಂದುಳಿದವರ ಚಾಂಪಿಯನ್
ಉಳುವವನೇ ಭೂಮಿಯ ಒಡೆಯ ಕಾಯ್ದೆಯಿಂದ ಲಕ್ಷಾಂತರ ಮಂದಿ ಜೀತದಾಳುಗಳು ಜೀತ ವಿಮುಕ್ತರಾದರು. ಅಷ್ಟೇ ಅಲ್ಲದೆ ಜೀತದಾಳುಗಳೂ ಭೂಮಿಯ ಒಡೆಯರಾದರು. ದುಡಿಯುವ ಕೈಗಳಿಗೆ ಭೂಮಿ ನೀಡಿದ ಖ್ಯಾತಿ ಅರಸು ಅವರಿಗೆ ಸಲ್ಲುತ್ತದೆ. ಹಿಂದುಳಿದ ವರ್ಗಗಳ ಪರ ಯಾವುದೇ ಕೆಲಸ ಮಾಡದವರೂ ತಾವು ಚಾಂಪಿಯನ್ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ಮಾಡಿದ್ದು ಏನೂ ಇಲ್ಲ. ಆದರೆ ನುಡಿದಂತೆ ನಡೆಯಲ್ಲಿ ತೋರಿಸಿದ ಅರಸು ಅವರು ಮಾತ್ರ ನಿಜವಾದ ಹಿಂದುಳಿದವರ ಚಾಂಪಿಯನ್ ಎಂದು ಬಣ್ಣಿಸಿದರು.
ಅರಸು ಅವರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂಬುದು ನೋವಿನ ಸಂಗತಿ. ಅವರಿಗೆ ಸಿಗಬೇಕಾದ ಪ್ರಾತಿನಿಧ್ಯ, ಮನ್ನಣೆ ಸಿಗದಿರುವುದು ಖೇದಕರ ಸಂಗತಿ. ಮನೆಯಿಲ್ಲದವರಿಗೆ ಜನತಾ ಮನೆ ವಿತರಣೆ ಯೋಜನೆ ಜಾರಿಗೊಳಿಸಿದ ಮೊದಲ ಮುಖ್ಯಮಂತ್ರಿ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಏಕೈಕ ಮುಖ್ಯಮಂತ್ರಿ, ಸ್ಥಿತಿವಂತರ ಸಮಾಜವಿದ್ದ ಕಾಲದಲ್ಲಿ ಇಂತಹ ಸುಧಾರಣೆ ಮಾಡಿದ್ದು ನಿಜಕ್ಕೂ ದೊಡ್ಡ ಸಾಧನೆ ಎಂದು ಹೇಳಿದರು.
ಅರಸು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರೂ ಸಾಗಿದರೆ ಸುಸ್ಥಿರ ಸಮಾಜ ನಿರ್ಮಿಸಲು ಸಾಧ್ಯ. ಹಾಗಾಗಿ ಅವರು ಎಂದೆಂದಿಗೂ ನಾಡಿನ ಜನರ ಮನದಲ್ಲಿ ಚಿರಸ್ಥಾಯಿಯಾಗಿರುತ್ತಾರೆ ಎಂದು ಸಚಿವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ರಂಗಸ್ವಾಮಿ, ಚಂದ್ರಶೇಖರ್, ವಿಜಯ್ ಕುಮಾರ್, ಅಮರನಾಥ್, ಆಂಜಿನಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.