ಕೊಡಗು ಜಿಲ್ಲೆಯ ಮಡಿಕೇರಿ ನಗರದ ಸ್ಟೋನ್ ಹಿಲ್ ಬೆಟ್ಟದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಬೆಟ್ಟದ ಮೇಲಿದ್ದ ನೂರಾರು ಟನ್ಗಳಷ್ಟು ಕಸದ ರಾಶಿ ಮಣ್ಣು ಹಾಗೂ ಕೆಸರಿನೊಂದಿಗೆ ಕೆಳಭಾಗಕ್ಕೆ ಕೊಚ್ಚಿಬಂದಿದೆ.
ಬೆಟ್ಟದ ತುದಿಯಲ್ಲಿ ಹಲವು ವರ್ಷಗಳಿಂದ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿರುವುದೇ ಭೂಕುಸಿತಕ್ಕೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ನಗರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ವಸತಿ ಗೃಹಗಳಿಗೆ ಕಸದ ರಾಶಿಯ ಆತಂಕ:
ಸ್ಟೋನ್ ಹಿಲ್ನ ಕೆಳಭಾಗದಲ್ಲೇ ಪೊಲೀಸ್ ವಸತಿ ಸಮುಚ್ಚಯವಿದ್ದು, ಭೂಕುಸಿತದಿಂದ ಕಸ ಮತ್ತು ಮಣ್ಣಿನ ರಾಶಿ ವಸತಿ ಪ್ರದೇಶದತ್ತ ಹರಿದುಬರುತ್ತಿದೆ. ಇದರಿಂದ ಅಲ್ಲಿನ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.
ಸ್ಥಳದಲ್ಲಿ ತಕ್ಷಣ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ನಗರಸಭೆ ಸದಸ್ಯ ಅಪ್ಪಣ್ಣ ಎಚ್ಚರಿಕೆ ನೀಡಿದ್ದಾರೆ. ಬೆಟ್ಟದ ಮೇಲಿರುವ ಕಸದ ರಾಶಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆಕಾಶವಾಣಿ ಟವರ್ ಬಳಿ ತಡೆಗೋಡೆ ಕುಸಿತ:
ಇದೇ ವೇಳೆ, ಭಾರಿ ಮಳೆಯಿಂದಾಗಿ ಮಡಿಕೇರಿಯ ಆಕಾಶವಾಣಿ ಟವರ್ ಬಳಿ ನಿರ್ಮಾಣ ಹಂತದಲ್ಲಿದ್ದ ತಡೆಗೋಡೆಯೂ ಕುಸಿದುಬಿದ್ದಿದೆ. ಘಟನೆಯ ವೇಳೆ ಕಾಮಗಾರಿ ನಡೆಯುತ್ತಿದ್ದರೂ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.
2018ರ ಮಳೆಗಾಲದಲ್ಲಿಯೂ ಇದೇ ಪ್ರದೇಶದಲ್ಲಿ ಬರೆ ಕುಸಿತ ಸಂಭವಿಸಿತ್ತು. ಈ ಬಾರಿ ಮಳೆಗಾಲದಲ್ಲಿ ಬರೆ ಕುಸಿಯದಂತೆ ಮುನ್ನೆಚ್ಚರಿಕೆಯಾಗಿ ತಡೆಗೋಡೆ ನಿರ್ಮಿಸಲಾಗುತ್ತಿತ್ತು. ಆದರೆ, ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಮೇಲ್ಭಾಗದ ಮಣ್ಣು ಕುಸಿದಿದೆ.
ಮಣ್ಣಿನೊಂದಿಗೆ ನಿರ್ಮಾಣ ಹಂತದಲ್ಲಿದ್ದ ತಡೆಗೋಡೆಯೂ ಜರಿದು ಬಿದ್ದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.







