ರಾಜ್ಯದಲ್ಲಿ ವರುಣನ ರೌದ್ರಾವತಾರಕ್ಕೆ 6 ಮಂದಿ ಬಲಿ
ಬೆಂಗಳೂರು : ರಾಜ್ಯದಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದ್ದು, ವರುಣನ ರೌದ್ರಾವತಾರಕ್ಕೆ ಆರು ಮಂದಿ ಕೊನೆಯುಸಿರೆಳೆದಿದ್ದಾರೆ.
ಉತ್ತರ ಕನ್ನಡದಲ್ಲಿ ಇಬ್ಬರು, ಬೆಳಗಾವಿಯಲ್ಲಿ ಇಬ್ಬರು ಮಹಾಮಳೆಗೆ ಬಲಿಯಾಗಿದ್ದರೇ ಚಿಕ್ಕಮಗಳೂರು, ದಾವಣಗೆರೆಯಲ್ಲಿ ಮಳೆಗೆ ತಲಾ ಒಬ್ಬರು ಬಲಿಯಾಗಿದ್ದಾರೆ.
ಚಿಕ್ಕೋಡಿ ಪಟ್ಟಣದ ರಾಮನಗರದಲ್ಲಿ ಭಾರೀ ಮಳೆಗೆ 12 ವರ್ಷದ ಬಾಲಕಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇಂದು ಆಕೆಯ ಶವ ಪತ್ತೆಯಾಗಿದೆ. ಕಿರಣ ವಿಭೂತಿ ಮೃತ ಬಾಲಕಿಯಾಗಿದ್ದಾರೆ.
ಇನ್ನು ಬೆಳಗಾವಿಯಲ್ಲಿ ಪ್ರವಾಹ ಉಂಟಾಗಿದ್ದು, ಮಹಾಮಳೆಗೆ ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಹುಕ್ಕೇರಿ ತಾಲೂಕಿನ ಗೌಡವಾಡ, ಅರ್ಜುನವಾಡ ಗ್ರಾಮಗಳಿಗೂ ಹೀರಣ್ಯಕೇಶಿ ನದಿ ನೀರು ನುಗ್ಗಿದೆ. ಕೃಷ್ಣಾ ನದಿಯ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆ ಉಂಟಾಗಿದ್ದು, 2 ಲಕ್ಷ 40 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಯ ಒಳಹರಿವು ಇದ್ದರೆ ಸಂಜೆವರೆಗೂ 3 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಕೃಷ್ಣಾ ನದಿಗೆ ಹರಿದು ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನದಿ ತೀರಗಳಲ್ಲಿ ಪ್ರವಾಹ ನಿರ್ಮಾಣವಾಗುವ ಸಾಧ್ಯತೆಗಳಿವೆ.