11 ಜಿಲ್ಲೆಗಳಲ್ಲಿ ಜಲತಾಂಡವ | 9 ಬಲಿ, ಮೂವರು ನಾಪತ್ತೆ
ಬೆಂಗಳೂರು : ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಬರೋಬ್ಬರಿ 11 ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ.
ಈವರೆಗೂ ರಾಜ್ಯದಲ್ಲಿ ಮಳೆಯಿಂದಾಗಿ 9 ಮಂದಿ ಕೊನೆಯುಸಿರೆಳೆದಿದ್ದು, ಮೂವರು ನಾಪತ್ತೆಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಕಷ್ಟು ಊರುಗಳು ಮುಳುಗಡೆಯಾಗಿದ್ದರೇ ರಸ್ತೆ, ಸೇತುವೆ ಜಮೀನುಗಳೆಲ್ಲ ಜಲಾವೃತವಾಗಿದೆ.
ಮಾಕೆರ್ಂಡೇಯ, ಹಿರಣ್ಯಕೇಶಿ, ಘಟಪಭಾ ನದಿಗಳ ಅಬ್ಬರಕ್ಕೆ ಗೋಕಾಕ್ ನಗರ ನಡುಗಡ್ಡೆ ಆಗಿದೆ.
ಚಿಕ್ಕೋಡಿಯ ಹುಕ್ಕೇರಿ ತಾಲೂಕಿನ ಬಡಕುಂದ್ರಿಯಲ್ಲಿ ಹಿರಣ್ಯಕೇಶಿ ನದಿ ಪ್ರವಾಹಕ್ಕೆ 89 ಹೆಚ್ಚು ಮನೆಗಳು ಮುಳುಗಡೆ ಆಗಿವೆ.
ಇತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಕದ್ರಾ ಜಲಾಶಯದಿಂದ ಕಾಳಿ ನದಿಗೆ 1ಲಕ್ಷ 58 ಸಾವಿರ ಕ್ಯೂಸೆಕ್ ನೀರು ಹರಿಯಬಿಡಲಾಗ್ತಿದೆ.
ಇದ್ರಿಂದ ಕಾರವಾರ ತಾಲೂಕಿನ ಸಿದ್ದರ, ಕಿನ್ನರ, ಖಾರ್ಗಾ, ವೈಲವಾಡ ಗ್ರಾಮಗಳು ಮುಳುಗಡೆ ಆಗಿದೆ.
ಇನ್ನು ಹಾವೇರಿ ಜಿಲ್ಲೆಯ ವರದಾ, ಕುಮುದ್ವತಿ, ತುಂಗಭದ್ರಾ, ಧರ್ಮಾ ನದಿಗಳು ಉಕ್ಕಿ ಹರಿಯತ್ತಿದೆ.
ಮಹಾ ಮಳೆಗೆ ಕಲಬುರಗಿ ಜಿಲ್ಲೆ ಅಕ್ಷರಶಃ ತತ್ತರಿಸಿ ಹೋಗಿದ್ದು, ಜಿಲ್ಲೆ ಕಾಳಗಿ ತಾಲೂಕಿನ ಹೊಸಹಳ್ಳಿ ಗ್ರಾಮ ಸಂಪೂರ್ಣ ಜಲಾವೃತವಾಗಿದೆ.
ತುಂಗಾ ಡ್ಯಾಂನಿಂದ ತುಂಗಾ ನದಿಗೆ 78 ಸಾವಿರ ಕ್ಯೂಸೆಕ್ ನೀರು ಬಿಡಲಾಗ್ತಿರುವುದರಿಂದ ಶಿವಮೊಗ್ಗ ನಗರದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಮಡಿಕೇರಿ, ಶಿವಮೊಗ್ಗ, ಯಾದಗಿರಿ, ಬಾಗಲಕೋಟೆ, ದಾವಣಗೆರೆಯಲ್ಲೂ ಮಳೆ ಆರ್ಭಟ ಜೋರಾಗಿದೆ. ಮುಂಗಾರು ಜಲತಾಂಡವಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ.










