ಬೆಳಗಾವಿ : ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆ ಆರ್ಭಟ ಹೆಚ್ಚಾದ ಹಿನ್ನೆಲೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇತ್ತ ಹಿಡಕಲ್ ಜಲಾಶಯದಲ್ಲಿ ಒಳಹರಿವು ಹೆಚ್ಚಾದ ಪರಿಣಾಮ ಡ್ಯಾಂನಿಂದ 40,000 ಕ್ಯೂಸೇಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಘಟಪ್ರಭಾ ನದಿ ತೀರದ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಇತ್ತ ಗೋಕಾಕ್ ತಾಲೂಕು ಆಡಳಿತದಿಂದ ನದಿ ತೀರದ ಗ್ರಾಮಗಳಲ್ಲಿ ಡಂಗೂರ ಸಾರಿಸಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಘಟ್ಟಪ್ರದೇಶದಿಂದ ಈಗಾಗಲೇ 30,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದೀಗ 40,000 ಕ್ಯೂಸೇಕ್ ನೀರು ಸೇರ್ಪಡೆಗೊಂಡಿದೆ. ಇನ್ನೂ ಮಾರ್ಕಂಡೇಯ ನದಿ ನೀರಿನ ಪ್ರಮಾಣದಲ್ಲೂ ಹೆಚ್ಚಳವಾಗಿದ್ದು, ನೆರೆ ಭೀತಿಯಲ್ಲೇ ಜನರು ಕಾಲ ಕಳೆಯುವಂತಾಗಿದೆ.









