ಸಿಲಕಾನ್ ಸಿಟಿಗೆ ತಂಪನ್ನೆರದ ವರುಣರಾಯ | ಮಳೆಯಿಂದ ವಿವಿಧಡೆ ಅವಾಂತರ
ಬೆಂಗಳೂರು: ಬಿಸಿಲಿನ ಬೇಗೆಗೆ ಸುಡುತ್ತಿದ್ದ ಸಿಲಕಾನ್ ಸಿಟಿ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ತಣ್ಣಗಾಗಿದ್ದು ಹಾಗೇ ಅವಾಂತವೂ ಆಗಿದೆ.
ನಿನ್ನೆ ರಾತ್ರಿ (ರವಿವಾರ) ಬೆಂಗಳೂರು ದಕ್ಷಿಣ ಭಾಗದ ಪ್ರದೇಶಗಳಾದ ಬೊಮ್ಮನಹಳ್ಳಿ, ಕೋರಮಂಗಲ, ಬಿಟಿಎಂ ಲೇಔಟ್, ಹೊಸೂರು ರಸ್ತೆ, ಮಡಿವಾಳ, ಎಚ್.ಎಸ್.ಆರ್ ಲೇಔಟ್, ಬಿಳೇಕಳ್ಳಿ ಸೇರಿ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಈ ಪ್ರದೇಶದ ಹಲವು ಭಾಗಗಳಲ್ಲಿ ರಾಜಕಾಲುವೆ ಉಕ್ಕಿ ಹರಿದು ಕೆಲಕಾಲ ಸ್ಥಳೀಯ ನಿವಾಸಿಗಳು ಪರದಾಡಿದರು.
ಚಿಕ್ಕಪೇಟೆ, ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ವೃತ್ತ, ಮೆಜೆಸ್ಟಿಕ್, ಗಾಂಧಿನಗರ, ವಿಧಾನಸೌಧ, ಮಾರ್ಕೆಟ್, ಚಾಮರಾಜಪೇಟೆ, ವಸಂತನಗರ, ಕೆ.ಆರ್.ಸರ್ಕಲ್, ಕೆಂಗೇರಿ, ರಾಜರಾಜೇಶ್ವರಿ ನಗರ ಭಾಗದಲ್ಲಿ ಗುಡುಗು, ಗಾಳಿ ಸಮೇತವಾಗಿ ಮಳೆ ಸುರಿಯಿತು.
ಮಳೆಯಿಂದ ನಗರದ ಹಲವೆಡೆ ನೀರು ನುಗ್ಗಿ ಅವಾಂತರವೇ ಸೃಷ್ಟಿಸಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ ಉಂಟಾಗಿದೆ. ಭಾರೀ ಗಾತ್ರದ ಮರಗಳೂ ವರುಣ ಆರ್ಭಟಕ್ಕೆ ಧರೆಗುರುಳಿದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಗರಪಾಲಿಕೆ ಮುಂದಾಗಿದೆ.
ನಗರದ ವಿವಿಧೆಡೆ 8 ಮರಗಳು ಧರೆಗುರುಳಿವೆ. ಕೆ.ಜಿ.ರಸ್ತೆಯಲ್ಲಿ ಬಿದ್ದಿದ್ದ ಬೃಹತ್ ಮರದಿಂದ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿತ್ತು. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಕಳೆದ ರಾತ್ರಿ ಎಷ್ಟು ಮಿ.ಮೀ ಮಳೆಯಾಗಿದೆ?
ಬೆಂಗಳೂರು – 20 ರಿಂದ 79, ವಿದ್ಯಾಪೀಠ – 79, ಸಂಪಂಗಿ ರಾಮನಗರ – 68, ರಾಜಮಹಲ್ ಗುಟ್ಟಹಳ್ಳಿ – 67.5, ಬಿಳೇಕಹಳ್ಳಿ – 63, ಅರಕೆರೆ – 61, ದೊರೆಸಾನಿ ಪಾಳ್ಯ – 51, ವಿವಿ ಪುರಂ – 51, ದಯಾನಂದ ನಗರ – 49.5, ಪುಲಕೇಶಿನಗರ – 47, ನಾಯಂಡಹಳ್ಳಿ – 46.5, ಹೆಮ್ಮಿಗೆ ಪುರ – 42.5, ಕುಮಾರಸ್ವಾಮಿ ಲೇಔಟ್ – 40, ಉತ್ತರಹಳ್ಳಿ – 32 ಮಿ.ಮೀ ನಷ್ಟು ಮಳೆಯಾಗಿದೆ.









