ಬೆಂಗಳೂರಿನಲ್ಲಿ ಭಾರಿ ಮಳೆ ಸಾಧ್ಯತೆ – ತೊಂದರೆಗಳಿಗೆ ಸಂಪರ್ಕಿಸಲು ಇಲ್ಲಿದೆ ಸಹಾಯವಾಣಿ ಸಂಖ್ಯೆಗಳು
ಬೆಂಗಳೂರು, ಜೂನ್ 12: ಭಾರತೀಯ ಹವಾಮಾನ ಇಲಾಖೆ ಇಂದಿನಿಂದ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಈ ಬಗ್ಗೆ ಬಿಬಿಎಂಪಿ ಟ್ವೀಟ್ ಮಾಡಿದ್ದು, ಯಾವುದೇ ತೊಂದರೆಗಳಿದ್ದಲ್ಲಿ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದೆ. ಸಾರ್ವಜನಿಕರು ರಸ್ತೆ, ಕಸ, ಮಳೆ ನೀರು ಸಂಗ್ರಹ, ಬೀದಿನಾಯಿಗಳ ಹಾವಳಿ ಸೇರಿದಂತೆ ವಿವಿಧ ವಿಚಾರಗಳ ಕುರಿತು ದೂರು ನೀಡಬಹುದಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಬಿಬಿಎಂಪಿ ವಲಯವಾರು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಸಾರ್ವಜನಿಕರ ಕರೆಗಳಿಗೆ ತುರ್ತಾಗಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಸಾರ್ವಜನಿಕರಿಗೆ ಮಳೆಯಿಂದಾಗಿ ಏನೇ ತೊಂದರೆ ಉಂಟಾದರೂ ಈ ನಂಬರ್ ಗಳಿಗೆ ಕರೆ ಮಾಡಿ ದೂರು ನೀಡುವಂತೆ ಬಿಬಿಎಂಪಿಯು ಸೂಚಿಸಿದ್ದು, ವಲಯವಾರು ಕರೆಗಳನ್ನು ಸ್ವೀಕಾರ ಮಾಡುವುದರಿಂದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ.

ಮುಂಗಾರು ಮಳೆಯೂ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಮಳೆಗಾಲದಲ್ಲಿ ತೊಂದರೆ ಉಂಟು ಮಾಡಬಲ್ಲ ಮರದ ರೆಂಬೆಗಳನ್ನು ಕಡಿಯುವ ನಿಟ್ಟಿನಲ್ಲಿಯೂ ಬಿಬಿಎಂಪಿಯು ಚಿಂತನೆ ನಡೆಸಿದೆ. ಅಷ್ಟೇ ಅಲ್ಲ ಮಳೆಗಾಲವನ್ನು ಎದುರಿಸುವ ನಿಟ್ಟಿನಲ್ಲಿ ಸಕಲ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಎಂಟು ವಲಯಗಳಲ್ಲಿ ಬಿಬಿಎಂಪಿ ಕಂಟ್ರೋಲ್ ರೂಮ್‌ಗಳನ್ನು ಸ್ಥಾಪನೆ ಮಾಡಿದ್ದು, ಮುಂಗಾರನ್ನು ಎದುರಿಸಲು ಬಿಬಿಎಂಪಿ ಸಜ್ಜಾಗಿದೆ.








