ಕಲಬುರಗಿ: ಶಿವಶರಣನಾಡು ಕಲಬುರಗಿ ಜಿಲ್ಲೆಯಲ್ಲಿ ವರುಣ ಮತ್ತೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ನಿನ್ನೆಯಿಂದ ಮತ್ತೆ ಧಾರಾಕಾರ ಮಳೆ ಸುರಿಯುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ತಡರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಕಲಬುರಗಿ ತಾಲೂಕಿನ ಉದನೂರು ಹಳ್ಳ ತುಂಬಿ ಹರಿಯುತ್ತಿದೆ. ಹೀಗಾಗಿ ಕಲಬುರಗಿ-ಉದನೂರು ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜತೆಗೆ ಉದನೂರು ಗ್ರಾಮದ ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಲಬುರಗಿ ನಗರದಲ್ಲೂ ಧಾರಾಕಾರ ಮಳೆಯಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ರಾತ್ರಿಯಡೀ ನಿವಾಸಿಗಳು ಮನೆಯಿಂದ ನೀರನ್ನು ಹೊರ ಹಾಕುವುದರಲ್ಲಿ ಹೈರಾಣಾಗಿ ಹೋಗಿದ್ದಾರೆ.

ಜೇವರ್ಗಿ ಪಟ್ಟಣದ ಲೋಕೋಪಯೋಗಿ ಇಲಾಖೆ ಕ್ವಾಟ್ರಸ್ಗಳಿಗೆ ಹೋಗುವ ರಸ್ತೆ ಸಂಪೂರ್ಣ ಕೊಚ್ಚಿಹೋಗಿದ್ದು, ಸಂಪರ್ಕ ಕಡಿತಗೊಂಡಿದೆ.
ಇತ್ತೀಚೆಗಷ್ಟೇ ಸುರಿದ ಮಳೆಗೆ ಈ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿತ್ತು. ನಂತರ ಅಧಿಕಾರಿಗಳು ರಸ್ತೆಯನ್ನು ದುರಸ್ಥಿ ಮಾಡಿದ್ದರು. ಕಳೆದ ರಾತ್ರಿ ಸುರಿದ ಮಳೆಗೆ ಮತ್ತೆ ರಸ್ತೆ ಕೊಚ್ಚಿ ಹೋಗಿರುವುದು ಜನರು ಅತಂತ್ರರಾಗುವಂತೆ ಮಾಡಿದೆ.
ಜಿಲ್ಲೆಯ ಸೇಡಂ ತಾಲೂಕಿನಲ್ಲೂ ಭಾರಿ ಮಳೆಯಾಗಿದೆ. ನೂರಾರು ಎಕರೆ ಪ್ರದೇಶದ ರೈತರ ಹೊಲಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

ಮುಧೋಳದಲ್ಲಿ ದಾಖಲೆಯ 147 ಮಿ.ಮೀ ಮಳೆ ಸುರಿದಿದ್ದು, ಇದೇ ಮೊದಲ ಬಾರಿಗೆ ಇಷ್ಟೊಂದು ಮಳೆಯಾಗಿದೆ ಎನ್ನಲಾಗಿದೆ. ಭಾರಿ ಮಳೆಯಿಂದ ಕಾಗಿಣಾ, ಕಮಲಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಹೊಲಗದ್ದೆಗಳು, ರಸ್ತೆಗಳು ಜಲಾವೃತಗೊಂಡಿವೆ.








