ಬೆಂಗಳೂರು : ನಿನ್ನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ವರ್ಷಧಾರೆ ಆಗಿದ್ದು, ಕೆಂಗೇರಿ ಬಳಿ ಮೋರಿಯೊಂದರ ತಡೆಗೋಡೆ ಕುಸಿದು ರಸ್ತೆಯಲ್ಲಾ ಜಲಾವೃತವಾಗಿತ್ತು. ಇದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.
ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ವೃಷಭಾವತಿ ನದಿ ಉಕ್ಕಿ ಹರಿದಿದ್ದು, ಕೆಂಗೇರಿಯ ದುಬಾಸಿಪಾಳ್ಯ ಬಳಿ ನದಿಯ ಹರಿವಿನ ರಭಸಕ್ಕೆ ತಡೆಗೋಡೆ ಕೊಚ್ಚಿಹೋಗಿದೆ. ಪರಿಣಾಮ ಮೈಸೂರು ರಸ್ತೆಗೆ ನೀರು ನುಗ್ಗಿದ್ದು, ರಸ್ತೆಯ ಒಂದು ಭಾಗ ಕುಸಿತವಾಗಿದೆ. ಹೀಗಾಗಿ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಇನ್ನು ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಕೆಂಗೇರಿ ಉಪನಗರ ರಸ್ತೆಯ ಮೂಲಕ ಬೆಂಗಳೂರು ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೈಸೂರಿಗೆ ತೆರಳುವ ವಾಹನಗಳು ನಾಯಂಡಳ್ಳಿ ತಿರುವು ಪಡೆದು ನೈಸ್ ರಸ್ತೆ ಮೂಲಕ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.








