ಉತ್ತರ ಪಾಕಿಸ್ತಾನದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅತಿವೃಷ್ಠಿ ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಕಳೆದ 48 ಗಂಟೆಗಳಲ್ಲಿ ಒಟ್ಟು 321 ಜನರು ಮಳೆಗೆ ಬಲಿಯಾದರೆ, ಅವರಲ್ಲಿ 307 ಜನರು ಖೈಬರ್ ಪುಂಖ್ಯಾ ಪ್ರಾಂತ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ಅತಿವೃಷ್ಠಿಯಿಂದ ಉಂಟಾದ ಭೂಕುಸಿತ, ಪ್ರವಾಹ ಹಾಗೂ ಮನೆ ಕುಸಿತಗಳು ಹೆಚ್ಚಿನ ಸಾವುಗಳಿಗೆ ಕಾರಣವಾಗಿವೆ. ಅನೇಕರು ಅವಶೇಷಗಳ ಕೆಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ದಳಗಳು ಕಾರ್ಯಾಚರಣೆ ಮುಂದುವರೆಸಿವೆ.
ಅಧಿಕ ಮಳೆಯಿಂದಾಗಿ ರಸ್ತೆ, ಸೇತುವೆ ಹಾಗೂ ವಿದ್ಯುತ್ ಸಂಪರ್ಕಗಳು ಸಂಪೂರ್ಣ ಹಾಳಾಗಿದ್ದು, ಸಾವಿರಾರು ಕುಟುಂಬಗಳು ಆಹಾರ, ನೀರು ಮತ್ತು ವೈದ್ಯಕೀಯ ನೆರವಿಲ್ಲದೆ ಸಂಕಷ್ಟದಲ್ಲಿದ್ದಾರೆ.
ಇಂದು ಸಹ ಭಾರೀ ಮಳೆಯ ಮುನ್ಸೂಚನೆ ಹೊರಡಿಸಲಾಗಿರುವುದರಿಂದ ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಾಗಿದೆ. ಸರ್ಕಾರ ತುರ್ತು ನೆರವು ಕಾರ್ಯಾಚರಣೆ ಕೈಗೊಂಡಿದ್ದರೂ, ಹಾನಿಯ ಪ್ರಮಾಣ ಭಾರಿ ಇರುವುದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರಲು ಇನ್ನೂ ಹೆಚ್ಚು ಸಮಯ ಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರವಾಹ ಪಾಕಿಸ್ತಾನದ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಭಾರೀ ಆಘಾತವೆಂದು ಪರಿಗಣಿಸಲಾಗುತ್ತಿದೆ.








