ಭಾರಿ ಮಳೆ – ಬೈಂದೂರಿನಲ್ಲಿ ಕಾಲುವೆ ದಾಟುವಾಗ ಕೊಚ್ಚಿ ಹೋದ ಬಾಲಕಿ…
ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನಲ್ಲಿ ಶಾಲೆ ಮುಗಿಸಿ ಮನೆಗೆ ಮರುಳುತ್ತಿದ್ದ 2ನೇ ತರಗತಿ ಬಾಲಕಿ ಸನ್ನಿಧಿ ಹೊಳೆಗೆ ಅಡ್ಡಲಾಗಿ ಹಾಕಿರುವ ಸಣ್ಣ ಕಾಲುಸಂಕ ದಾಟುವಾಗ ಜಾರಿಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ.
ಬೈಂದೂರು ತಾಲ್ಲೂಕಿನ ಕಾಲ್ತೋಡು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಬೊಳಂಬಳ್ಳಿಯ ಮಕ್ಕಿಮನೆ ಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ ಸನ್ನಿಧಿಯಾಗಿದ್ದಾಳೆ. ಆಕೆಯ ಪತ್ತೆಗೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಸ್ಥಳೀಯರು ತೀವ್ರ ಶೋಧ ನಡೆಸುತ್ತಿದ್ದರೂ ಸನ್ನಿಧಿ ಇನ್ನೂ ಪತ್ತೆಯಾಗಿಲ್ಲ.
ಚಪ್ಪರಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಸನ್ನಿಧಿ ನಿನ್ನೆ ಸೋಮವಾರ ಮನೆಗೆ ಆಯಾ ಜೊತೆ ಹಿಂತಿರುಗುವಾಗ ಬೀಜಮಕ್ಕಿ ಎಂಬಲ್ಲಿ ಈ ಅವಘಡ ನಡೆದಿದೆ. ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಭೇಟಿ ಕೊಟ್ಟು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.








