ರಾಜ್ಯದ ಹಲವೆಡೆ ಭಾರಿ ಮಳೆ : ಕೊಡಗಿನಲ್ಲಿ ರೆಡ್ ಅಲರ್ಟ್ Kodagu
ಬೆಂಗಳೂರು : ರಾಜ್ಯದಲ್ಲಿ ಮಳೆರಾಯ ಅಬ್ಬರ ಜೋರಾಗಿದ್ದು, ಹಲವು ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ನಾನಾ ಅವಾಂತರಗಳು ಸೃಷ್ಠಿಯಾಗಿವೆ.
ಕೊಡಗಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆ ಬೀಳುವ ಸಾಧ್ಯತೆಗಳಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈಗಾಗಲೇ ಬಿದ್ದಿರುವ ಮಳೆಯಿಂದಾಗಿ ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ನದಿ ತೀರದಲ್ಲಿರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಇತ್ತ ಬೀದರ್ ನ ಔರಾದ್ ನಲ್ಲಿ ವರುಣ ಆರ್ಭಟಿಸಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಚಿಕ್ಕೋಡಿಯಲ್ಲಿ ಕೃಷ್ಣಾ ನದಿ ನೀರಿನ ಹರಿವು ಏರಿಕೆಯಾಗಿದ್ದು, ನದಿ ತೀರದ ಜನರಿಗೆ ಎಚ್ಚರಿಕೆ ರವಾನಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಅಬ್ಬರದ ಮಳೆ ಸುರಿಯುತಿದ್ದು, ಕಾರವಾರ ಕಡಲತೀರದಲ್ಲಿ ಬಿರುಗಾಳಿ ಸಹಿತ ಅಬ್ಬರದ ಅಲೆಗಳು ಏಳುತ್ತಿವೆ. ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.