ನಾಳೆಯಿಂದ ಕೊಡಗಿನಲ್ಲಿ ಬಿರುಸುಗೊಳ್ಳಲಿದೆ ಮಳೆ – ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ
ಕೊಡಗು, ಜೂನ್ 11: ಕೊಡಗಿನಲ್ಲಿ ಮುಂಗಾರು ಬಿರುಸುಗೊಳ್ಳುವ ಸಾಧ್ಯತೆ ಇರುವ ಕಾರಣ ಶುಕ್ರವಾರ ಯೆಲ್ಲೋ ಅಲರ್ಟ್ ಮತ್ತು ಶನಿವಾರ, ಭಾನುವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಶುಕ್ರವಾರದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಇಂದು (ಜೂನ್ 11) ಸಾಧಾರಣದಿಂದ ಮಧ್ಯಮ ಮಳೆಯಾಗುವ ಸಂಭವವಿದ್ದು, ಶುಕ್ರವಾರದಿಂದ ಬಿರುಸುಗೊಳ್ಳಲಿದೆ. ಶುಕ್ರವಾರ ಶನಿವಾರ ಮತ್ತು ಭಾನುವಾರ ಭಾರೀ ಮಳೆಯಾಗುವ ಸಂಭವವಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಗೆ 25 ಮಂದಿಯ ಎನ್ ಡಿ ಆರ್ ಎಫ್ ನ ತುಕಡಿ ಆಗಮಿಸಿದೆ. ಕೊಡಗು ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವುದಿಲ್ಲ ಮನವಿ ಮಾಡಿದ್ದು, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ದೂರವಾಣಿ ಸಂಖ್ಯೆ 08272-221077 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಲ್ಲೆಯಲ್ಲಿ ಶುಕ್ರವಾರ 64.5 ಮಿಮೀ ನಿಂದ 115.5 ಮಿಮೀ ರವರೆಗೆ, ಶನಿವಾರ ಮತ್ತು ಭಾನುವಾರ 115.6 ಮಿಮೀ ನಿಂದ 204.4 ಮಿಮೀ ರವರೆಗೆ ಮಳೆಯಾಗುವ ಸಾಧ್ಯತೆಯಿದ್ದು, ಭಾರೀ ಮಳೆಯಿಂದ ಭೂಕುಸಿತ ಉಂಟಾಗುವ ಸಾಧ್ಯತೆಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ್ದು, ಬುಲೆಟ್ ಟ್ಯಾಂಕರ್ಸ್, ಶಿಫ್ ಕಾರ್ಗೋ, ಕಂಟೈನರ್, ಲಾಂಗ್ ಚಾಸಿಸ್ ವಾಹನಗಳು ಸೇರಿ ಎಲ್ಲ ಬಗೆಯ ಭಾರೀ ವಾಹನಗಳ ಓಡಾಟಕ್ಕೆ ನಿಷೇಧ ಹೇರಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ. ಅಡುಗೆ ಅನಿಲ, ಇಂಧನ ಪೂರೈಕೆ ವಾಹನಗಳು, ಹಾಲು ಪೂರೈಕೆ ವಾಹನಗಳು, ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸಲ್ಪಡುವ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ.