ಶಿವಮೊಗ್ಗ: ಒಂದೇ ದಿನ ಎರಡು ಬಾರಿ ಹೆಜ್ಜೇನು ದಾಳಿ ನಡೆಸಿದ್ದರಿಂದಾಗಿ ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹೊಸನಗರ (Hosanagar) ತಾಲೂಕಿನ ಚಿಕ್ಕಪೇಟೆ (Chikkapete) ನಗರದಲ್ಲಿ ಈ ಘಟನೆ ನಡೆದಿದೆ. ಒಂದೇ ದಿನ ಎರಡು ಬಾರಿ ಹೆಜ್ಜೇನುಗಳು ದಾಳಿ ನಡೆಸಿವೆ. ಚಿಕ್ಕಪೇಟೆನಗರದ ಭಾಷಾ ಎಂಬುವವರ ಮನೆ ಹತ್ತಿರ ಈ ಘಟನೆ ನಡೆದಿದೆ. ಘಟನೆಯಲ್ಲಿ ಭಾಷಾ, ಪತ್ನಿ ಅಸ್ಮಾ, ಮಕ್ಕಳಾದ ಆರೀಫ್, ಅನೀಫ್, ಭಾಷಾ ಪಕ್ಕದ ಮನೆ ನಿವಾಸಿ ಯಾಸೀನ್, ಹಾಸಿಗೆ ರಿಪೇರಿಗಾಗಿ ತೆರಳಿದ್ದ ಹುಸೇನ್ ಸಾಬ್, ಬಾಬಾ ಸಾಬ್ ಎಂಬುವವರ ಮೇಲೆ ದಾಳಿ ಮಾಡಿವೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ, ಹುಸೇನ್ ಸಾಬ್ (68) ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಹೊಸನಗರದ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೇ ದಿನ ಮತ್ತೊಮ್ಮೆ ದಾಳಿ ನಡೆಸಿರುವ ಹೆಜ್ಜೇನು ಹಲವರು ಮೇಲೆ ದಾಳಿ ನಡೆಸಿವೆ. ಇದರಿಂದಾಗಿ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.








