ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿ ನಮಗೆ ಸಹಾಯ ಮಾಡಿ – ಚೀನಾ ಗಡಿಯಲ್ಲಿ ಯೋಧನ ಕರೆ
ಲಡಾಖ್, ಜೂನ್ 28: ಲಡಾಖ್ ಗಡಿ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 75ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಚೀನಾದ ಮೇಲೆ ಆಕ್ರೋಶಿತರಾಗಿರುವ ಭಾರತೀಯರು ಚೀನಾ ವಸ್ತುಗಳನ್ನು, ಆ್ಯಪ್ ಗಳನ್ನು ಬಹಿಷ್ಕಾರ ಮಾಡುತ್ತಿದ್ದು, ಈ ಮೂಲಕ ಚೀನಾದ ಅರ್ಥಿಕತೆಗೆ ಪೆಟ್ಟನ್ನು ಕೊಡಲು ಸಿದ್ಧರಾಗಿದ್ದಾರೆ.
ಪ್ರಧಾನಿಯು ಸೇರಿದಂತೆ ಹಲವಾರು ಪ್ರಮುಖರು ಈಗಾಗಲೇ ಚೀನಿ ವಸ್ತುಗಳನ್ನು ಬಹಿಷ್ಕಾರ ಮಾಡಲು ಕರೆ ಕೊಟ್ಟಿದ್ದು, ಸ್ವದೇಶಿ ಉತ್ಪನ್ನಗಳನ್ನು ಬಳಸುವಂತೆ ಕೇಳಿಕೊಂಡಿದ್ದಾರೆ. ಇದೀಗ ಗಡಿಯಲ್ಲಿ ನಮ್ಮ ರಕ್ಷಣೆ ಮಾಡುತ್ತಿರುವ ಯೋಧರು ಕೂಡ ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಧ್ವನಿಗೂಡಿಸಿದ್ದಾರೆ.
ಭಾರತದ ಮಾರುಕಟ್ಟೆಯನ್ನು ಬಹುತೇಕ ಅವರಿಸಿರುವ ಚೀನಾದ ವಸ್ತುಗಳನ್ನು ಭಾರತೀಯರು ಬಹಳಷ್ಟು ಬಳಸುತ್ತಿದ್ದು, ಇದೀಗ ಜನರು ಚೀನಾ ವಸ್ತುಗಳನ್ನು ಬಹಿಷ್ಕಾರಿಸುವ ಅಭಿಯಾನದಲ್ಲಿ ಭಾಗಿಯಾಗುತ್ತಿದ್ದಾರೆ. ಈ ನಡುವೆ ಭಾರತೀಯ ಯೋಧರೊಬ್ಬರು ಚೀನಾ ಗಡಿಯಲ್ಲಿ ದುರ್ಗಮವಾದ ಬೆಟ್ಟ ಗುಡ್ಡಗಳ ನಡುವೆ ದಾರಿ ಮಾಡಿಕೊಳ್ಳುತ್ತಾ ಕಾಲ್ನಡಿಗೆಯಲ್ಲಿ ಗಡಿ ಪ್ರದೇಶವನ್ನು ತಲುಪಿ ನಮನ್ನು ರಕ್ಷಿಸುವುದರ ಬಗ್ಗೆ ವಿಡಿಯೋ ಮಾಡಿದ್ದಾರೆ.
ಅಷ್ಟೇ ಅಲ್ಲ ಆ ವಿಡಿಯೋದಲ್ಲಿ ನಾವು ಗಡಿಯಲ್ಲಿ ನಿಮ್ಮ ರಕ್ಷಣೆ ಮಾಡುತ್ತೇವೆ. ನೀವು ಮನೆಯಲ್ಲಿ ಸುರಕ್ಷಿತರಾಗಿ ಇರಿ ಮತ್ತು ಅಲ್ಲಿಂದಲೇ ಚೀನಾ ಆ್ಯಪ್ ಗಳನ್ನು, ಅವರ ಉತ್ಪನ್ನಗಳನ್ನು ಬಹಿಷ್ಕರಿಸಿ. ಆ ಮೂಲಕ ನಮಗೆ ಸಹಾಯ ಮಾಡಿ ಮತ್ತು ದೇಶ ಸೇವೆ ಮಾಡಿ ಎಂದು ಕರೆ ನೀಡಿರುವ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.








