ಕೊರೋನಾ ವೈರಸ್ ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಎಲ್ಲೆಡೆಯೂ ಆತಂಕದ ವಾತಾವರಣ. ಇಡೀ ವಿಶ್ವವೇ ಲಾಕ್ ಡೌನ್ ಆಗಿದ್ದು, ಜಾಗತಿಕ ಅರ್ಥಿಕ ಪರಿಸ್ಥಿತಿಯೇ ಬುಡಮೇಲಾಗಿದೆ. ಭಾರತದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಸುಮಾರು 500 ಕ್ಕಿಂತ ಹೆಚ್ಚಿದ್ದು, ಕೊರೊನಾದಿಂದ 10 ಮಂದಿ ಇಲ್ಲಿಯವರೆಗೆ ಸಾವನ್ನಪ್ಪಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಉದ್ಯಮಿಗಳು ತಮ್ಮ ಸಹಾಯ ಹಸ್ತ ಚಾಚಿದ್ದು, ಕೊರೊನಾ ಸೋಂಕು ತಡೆಗಟ್ಟಲು ತಮ್ಮ ಕೈಲಾದ ಸಹಾಯ ಮಾಡಲು ಮುಂದಾಗಿದ್ದಾರೆ.
ವೆಂಡೇಟಾದ ಚೇರ್ಮನ್ ಅನಿಲ್ ಅಗರ್ವಾಲ್, ಕೊರೊನಾ ವಿರುದ್ಧ ಹೋರಾಡಲು ನೂರು ಕೋಟಿ ನೀಡುವುದಾಗಿ ಘೋಷಿಸಿದ್ದರೆ, ಆನಂದ್ ಮಹೀಂದ್ರಾ ಕೂಡಾ ವೆಂಟಿಲೇಟರ್ ನಿರ್ಮಿಸುವಲ್ಲಿ ಕೈಲಾದ ಸಹಾಯ ಮಾಡುತ್ತೇನೆ ಹಾಗೂ ರೆಸಾರ್ಟ್ ಗಳನ್ನು ಕೆಲ ದಿನಗಳಿಗೆ ಆಸ್ಪತ್ರೆಗಳಾಗಿ ಮಾರ್ಪಾಡು ಮಾಡುತ್ತೇನೆ ಎಂದಿದ್ದಾರೆ. ಇನ್ಪೋಸಿಸ್ ಫೌಂಡೇಷನ್ ನ ಸುಧಾ ಮೂರ್ತಿ, ಕೊರೋನಾ ತಡೆಗಟ್ಟಲು ಸಕಲ ರೀತಿಯಲ್ಲಿ ಸರಕಾರದ ಜೊತೆ ಕೈ ಜೋಡಿಸಲು ಸಿದ್ಧವೆಂದು ಘೋಷಿಸಿದ್ದಾರೆ.
ರಿಲಾಯನ್ಸ್ ಇಂಡಸ್ಟ್ರೀಸ್ ಒಡೆಯ ಮುಖೇಶ್ ಅಂಬಾನಿ, ಮಹಾರಾಷ್ಟ್ರ ಸಿಎಂ ನಿಧಿಗೆ ಐದು ಕೋಟಿ ನೀಡಿದ್ದು, ಇದೀಗ ಕೊರೊನಾ ಬಿಗಿಮುಷ್ಟಿಯಲ್ಲಿ ನಲುಗಿರುವ ಮಹಾರಾಷ್ಟ್ರದಲ್ಲಿ ಕೊರೊನಾ ವಿರುದ್ಧ ಹೋರಾಡಲು ಆಸ್ಪತ್ರೆ ಯನ್ನು ನಿರ್ಮಿಸಿದ್ದಾರೆ. ಮುಂಬೈ ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಕೊರೊನಾ ವೈರಸ್ ಮಹಾಮಾರಿಯನ್ನು ತಡೆಗಟ್ಟಲು ಹೆಚ್.ಎನ್ ರಿಲಾಯನ್ಸ್ ಫೌಂಡೇಶನ್ ಆಸ್ಪತ್ರೆಯನ್ನು ಕೇವಲ ಎರಡೇ ವಾರದಲ್ಲಿ ನಿರ್ಮಿಸಿದ್ದಾರೆ. ಮುಂಬೈನ ಸೆವೆನ್ ಹಿಲ್ಸ್ ಏರಿಯಾದಲ್ಲಿ ಈ ನೂತನ ಆಸ್ಪತ್ರೆ ತಲೆ ಎತ್ತಿದ್ದು, ಈ ಆಸ್ಪತ್ರೆ ನೆಗೆಟಿವ್ ಪ್ರೆಷರ್ ರೂಮ್ ಸೌಲಭ್ಯವನ್ನೂ ಹೊಂದಿದೆ. ಆರ್ಐಎಲ್ ಇಂಡಸ್ಟ್ರಿಯ ವತಿಯಿಂದ ಲೋದಿವಲಿಯಲ್ಲಿ ಐಸೋಲೇಷನ್ ಫೆಸಿಲಿಟಿಯನ್ನು ತೆರೆಯಲಾಗಿದ್ದು, ಮುಖೇಶ್ ಅಂಬಾನಿಯ ಸಂಸ್ಥೆ ಸದ್ದಿಲ್ಲದೆ ಕೊರೊನಾದ ವಿರುದ್ಧದ ಹೋರಾಟಕ್ಕೆ ನೆರವಾಗಲು ಹಲವು ರೀತಿಯಲ್ಲಿ ಶ್ರಮ ವಹಿಸುತ್ತಿದೆ.