ಬಿಸಿಸಿಐನ ಹಂಗಾಮಿ ಸಿಇಓ ಆಗಿ ಹೇಮಾಂಗ್ ಆಮೀನ್ ನೇಮಕ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ.. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎಂಬ ಹೆಗ್ಗಳಿಕೆ ಇದೆ. ವಿಶ್ವ ಕ್ರಿಕೆಟ್ ನಲ್ಲಿ ಏನೇ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಾದ್ರೂ ಬಿಸಿಸಿಐನ ಅನಮತಿ ಬೇಕೇ ಬೇಕು. ಅಷ್ಟರ ಮಟ್ಟಿಗೆ ಬಿಸಿಸಿಐ ಬೆಳೆದು ನಿಂತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯನ್ನೇ ತನ್ನ ಕೈಬೆರಳಿನಲ್ಲೇ ಆಡಿಸುತ್ತಿರುವ ಬಿಸಿಸಿಐ ಕ್ರಿಕೆಟ್ ಜಗತ್ತಿನ ದೊಡ್ಡಣ್ಣ.
ಅಂದ ಹಾಗೇ, ಕಳೆದ ಎರಡು ಮೂರು ವರ್ಷಗಳ ಹಿಂದೆ ಬಿಸಿಸಿಐ ಆಡಳಿತದಲ್ಲಿ ಪಾರದರ್ಶಕತೆ ಇಲ್ಲ ಅನ್ನೋ ಕಾರಣಕ್ಕಾಗಿ ಕ್ರಿಕೆಟ್ ಆಡಳಿತಾಧಿಕಾರಿಯನ್ನು ಸುಪ್ರೀಂ ಕೋರ್ಟ್ ನೇಮಕ ಮಾಡಿತ್ತು. ಆದಾದ ನಂತರ ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ನೇಮಕರಾಗಿದ್ದರು.
ಇನ್ನು ಕ್ರಿಕೆಟ್ ಆಡಳಿತಾಧಿಕಾರಿಯ ಆಡಳಿತ ಅವಧಿಯಲ್ಲಿ ಬಿಸಿಸಿಐಗೆ ರಾಹುಲ್ ಜೊಹ್ರಿ ಅವರನ್ನು ಬಿಸಿಸಿಐ ಸಿಇಓ ಆಗಿ ನೇಮಕ ಮಾಡಲಾಗಿತ್ತು. ಆದ್ರೆ ಅವರು ಇತ್ತೀಚೆಗೆ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಲ್ಲದೆ ಅವರ ರಾಜೀನಾಮೆಯನ್ನು ಬಿಸಿಸಿಐ ಅಂಗೀಕರಿಸಿತ್ತು. ಇದೀಗ ಬಿಸಿಸಿಐ ಹಂಗಾಮಿ ಸಿಇಓ ಹುದ್ದೆಗೆ ಹೇಮಾಂಗ್ ಆಮಿನ್ ಅವರನ್ನು ನೇಮಕ ಮಾಡಿದೆ.
ಹೇಮಾಂಗ್ ಆಮಿನ್ ಅವರು ಐಪಿಎಲ್ ಆಪರೇಷನ್ ವಿಭಾಗವನ್ನು ನೋಡಿಕೊಳ್ಳುತ್ತಿದ್ದರು. 2017ರಿಂದ ಆಮಿನ್ ಅವರು ರಾಹುಲ್ ಜೊಹ್ರಿ ಜೊತೆ ಕೆಲಸ ಕೂಡ ಮಾಡಿದ್ದರು. ಆದ್ರೆ ಆಮಿನ್ ಅವರು ಜೊಹ್ರಿಯಷ್ಟು ವೇತನವನ್ನು ಪಡೆಯುವುದಿಲ್ಲ. ಮೊದಲ ಬಾರಿ ಸಿಇಓ ಆಗಿ ನೇಮಕವಾಗಿದ್ದ ರಾಹುಲ್ ಜೊಹ್ರಿ ಹೆಚ್ಚು ವೇತನ ಪಡೆದುಕೊಳ್ಳುತ್ತಿದ್ದರು. ಅಲ್ಲದೆ ಅವರ ಆಯ್ಕೆಯನ್ನು ಏಜೆನ್ಸಿಯೊಂದಕ್ಕೆ ವಹಿಸಲಾಗಿತ್ತು.
ಇದೀಗ ಮುಂದಿನ ಸಿಇಓ ಹುದ್ದೆಯನ್ನು ಮುಂದಿನ ಎರಡು ಮೂರು ತಿಂಗಳಲ್ಲಿ ಭರ್ತಿ ಮಾಡಲಾಗುವುದು. ಇಲ್ಲಿ ಬಿಸಿಸಿಐ ಸ್ವತಂತ್ರವಾಗಿ ಆಯ್ಕೆ ಮಾಡಲಿದೆ. ಸಿಇಓ ಹುದ್ದೆಯ ಆಯ್ಕೆಯ ಜವಾಬ್ದಾರಿಯನ್ನು ಯಾವುದೇ ಏಜೆನ್ಸಿಗೆ ನೀಡಲಾಗುವುದಿಲ್ಲ. ಇನ್ನು ಹೊಸ ಸಿಇಓ ಅಧಿಕಾರ ವಹಿಸಿಕೊಳ್ಳುವ ತನಕ ಮಧ್ಯಂತರ ಅವಧಿಗೆ ಹೇಮಾಂಗ್ ಆಮಿನ್ ಅವರು ಸಿಇಓ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಮುಂದಿನ ಸಿಇಓ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಜೊತೆಗೆ ಜಾಹೀರಾತು ಕೂಡ ನೀಡಲಾಗುವುದು ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ.