ಜಗತ್ತೇ ಕರೋನಾ ಸಂಕಷ್ಟದಿಂದ ಪರಿತಪಿಸುತ್ತಿರುವ ಈ ಸಂದರ್ಭದಲ್ಲಿ ಉಳ್ಳವರು ತಮ್ಮ ಸಂಪತ್ತಿನ ಒಂದಂಶವಾದರೂ ಮೀಸಲಿಟ್ಟು ಉದಾರತೆ ಮೆರೆಯಬೇಕಿರುವುದು ನಿಜವಾದ ಮಾನವೀಯ ಧರ್ಮ. ಈ ನಿಟ್ಟಿನಲ್ಲಿ ಸಕಾಲಕ್ಕೆ ಮಿಡಿದ ಶ್ರೀಮಂತರ ಹೃದಯ ಶ್ರೀಮಂತಿಕೆಯ ಕೆಲವು ಜೀವಂತ ಉದಾಹರಣೆಗಳು ಇಲ್ಲಿವೆ.
ಅಲಿಬಾಬಾ ಸಂಸ್ಥಾಪಕ ಹಾಗೂ ಸದ್ಯ ಏಷ್ಯಾ ನಂಬರ್ ಒನ್ ಶ್ರೀಮಂತ ಜಾಕ್ ಮಾ ಕರೋನಾ ವೈರಸ್ ನಿಯಂತ್ರಣಕ್ಕೆ 14.4 ಮಿಲಿಯನ್ ಡಾಲರ್ ಹಣವನ್ನು ದೇಣಿಗೆಯನ್ನಾಗಿ ನೀಡಿದ್ದಾರೆ. ವಿಶ್ವದ ಆಗರ್ಭ ಶ್ರೀಮಂತ ಬಿಲ್ ಗೇಟ್ಸ್ ತಮ್ಮ ಬಿಲ್ ಗೇಟ್ಸ್ ಮತ್ತು ಮಿಲಿಂದಾ ಗೇಟ್ಸ್ ಫೌಂಡೇಷನ್ ಮೂಲಕ 10 ಮಿಲಿಯನ್ ಡಾಲರ್ ಹಣವನ್ನು ಕರೋನಾ ತೊಲಗಿಸಲು ಮೀಸಲಿಟ್ಟಿದ್ದಾರೆ. ಹಾಂಗ್ ಕಾಂಗ್ ನ ಆಗರ್ಭ ಶ್ರೀಮಂತ ಲಿ ಕಾ ಶಿಂಗ್ ತನ್ನ ದುಡಿಮೆಯ ಹಣದಲ್ಲಿ 13 ಮಿಲಿಯನ್ ಡಾಲರ್ ಮೊತ್ತವನ್ನು ಚೀನಾದ ವುಹಾನ್ ಆರೋಗ್ಯ ಸಿಬ್ಬಂದಿಗಳಿಗಾಗಿ ಮತ್ತು ಕರೋನಾ ಮಾರಿಯನ್ನು ತೊಲಗಿಸಲು ಎತ್ತಿಟ್ಟಿದ್ದಾರೆ. ಸಿರಿವಂತ ಫ್ಯಾಶನ್ ಡಿಸೈನರ್ ಗಾರ್ಜಿಯೋ ಅರ್ಮಾನಿ 1.43 ಮಿಲಿಯನ್ ಡಾಲರ್ ಹಣವನ್ನು ಇಟಲಿಯ ಕರೋನಾ ಸೋಂಕಿತರ ಉಪಚಾರಕ್ಕಾಗಿ ಕೊಟ್ಟಿದ್ದಾರೆ. ಬಿಲಿಯನೇರ್ ಕೆನ್ ಗ್ರಿಫಿನ್ ಚೀನಾದ ಹುಬೈ ಪ್ರಾಂತ್ಯದ ಕರೋನಾ ಸಂಕಷ್ಟಕ್ಕಾಗಿ ಮರುಗಿ 7.5 ಮಿಲಿಯನ್ ಡಾಲರ್ ತೆಗೆದಿಟ್ಟಿದ್ದಾರೆ. ಫ್ರೆಂಚ್ ಬಿಲಿಯನೇರ್ ಬರ್ನಾರ್ಡ್ ಅರ್ನಾಲ್ಟ್ 3.3 ಮಿಲಿಯನ್ ಡಾಲರ್, ಚೀನಾದ ಇನ್ನೊಬ್ಬ ಬಿಲಿಯನೇರ್ ಸ್ಪೋರ್ಟ್ಸ್ ಬ್ರಾಂಡ್ ಸಂಸ್ಥೆಯ ಮಾಲೀಕ ಡಿಂಗ್ ಶೆಜಾಂಗ್ 1.4 ಮಿಲಿಯಮ್ ಡಾಲರ್ ಹಣವನ್ನು ಕೇವಲ ಕರೋನ ಕಂಟ್ರೋಲ್ ಕಾರಣಕ್ಕೆ ನೀಡಿವೆ.
ಮೈಕ್ರೋಸಾಫ್ಟ್, ಡೆಲ್, ಲೋರಿಯಲ್, ಕೋರ್ಗಿಲ್ ಸಂಸ್ಥೆಗಳು ಒಟ್ಟು ಸೇರಿಸಿ 1.4 ಮಿಲಿಯನ್ ಡಾಲರ್ ಹಣವನ್ನು ಚೀನಾದ ರೆಡ್ ಕ್ರಾಸ್ ಮತ್ತು ಹುಬೈ ಪ್ರಾಂತ್ಯದ ಕಲ್ಯಾಣಕ್ಕಾಗಿ ನೀಡಿವೆ. ಆ್ಯಪಲ್ ಸಿಇಓ ಟಿಮ್ ಕುಕ್ ಸಹ ತನ್ನ ಸಂಸ್ಥೆಯ ವತಿಯಿಂದ ದೊಡ್ಡ ಮೊತ್ತವನ್ನು ಕರೋನಾ ಲಸಿಕೆ ಕಂಡು ಹಿಡಿಯಲು ನೀಡುವುದಾಗಿ ಭರವಸೆ ನೀಡಿ ಕಾರ್ಯಪ್ರವೃತ್ತರಾಗಲು ಉತ್ತೇಜಿಸಿದ್ದಾರೆ.
ಇವಿಷ್ಟು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾದ ಕೆಲವು ಮಹತ್ವದ ದೇಣಿಗೆಯ ವರದಿಗಳು. ವಿಶ್ವದಾದ್ಯಂತ ಕರೋನಾ ನಿಯಂತ್ರಣಕ್ಕೆ ತಮ್ಮ ದುಡಿಮೆಯ ಹಣವನ್ನು ಕೊಟ್ಟ ಮಲ್ಟಿ ಮಿಲೇನಿಯರ್ ಗಳ ಸಂಖ್ಯೆ ಇನ್ನೂ ಹೆಚ್ಚಿರಬಹುದು. ನಮ್ಮದೇ ರಾಜ್ಯದ ಇನ್ಫೋಸಿಸ್ ಫೌಂಡೇಷನ್ ನ ಸುಧಾ ಮೂರ್ತಿ ಅಮ್ಮ ಕರೋನಾ ಸಂಕಷ್ಟಕ್ಕೆ ತಕ್ಞಣಕ್ಕೆ ಸ್ಪಂಧಿಸಿ ಸಾಧ್ಯವಾದ ನೆರವು ನೀಡುವುದಾಗಿ ಘೋಷಸಿದ್ದಾರೆ. ಇದೆಲ್ಲಾ ದೊಡ್ಡವರ ದೊಡ್ಡತನಕ್ಕೆ ಅತ್ಯಂತ ಸರಳವಾದ ಒಂದಷ್ಟು ಉದಾಹರಣೆಗಳು.
ಆದ್ರೆ ಗಮನಿಸಿ ನೋಡಿ ಇಲ್ಲಿ ಎಲ್ಲಿಯೂ ನಮ್ಮ ರಾಷ್ಟ್ರದ ಆಗರ್ಭ ಶ್ರೀಮಂತರಾದ ಅಂಬಾನಿಗಳು, ಅದಾನಿ, ಹಿಂದೂಜಾಗಳು, ಬಿರ್ಲಾಗಳು ಅಪ್ಪಿ ತಪ್ಪಿಯೂ ಒಂದೇ ಒಂದು ಪೈಸೆ ಕೊಡ್ತೀವಿ ಅಂದಿಲ್ಲ. ಇವರಿಂದ ಸಮಾಜಕ್ಕಾಗಲೀ ರಾಷ್ಟ್ರಕ್ಕಾಗಲೀ ಒಂದೇ ಪೈಸೆ ಪ್ರಯೋಜನವಿಲ್ಲ.
ತೀರಾ ವಿಶ್ವವೇ ತಲ್ಲಣಿಸುತ್ತಿರುವ ಈ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಅಗಾಧ ಸಂಪತ್ತಿನಲ್ಲಿ ಒಂದೇ ಹನಿ ಎತ್ತಿ ಕೊಡಬೇಕು ಎನ್ನುವ ಸಾಮಾನ್ಯ ಮಾನವೀಯತೆಯೂ ಇವರಿಗಿಲ್ಲ. ಇಂತವರಿಗೆ ರೆಡ್ ಕಾರ್ಪೇಟ್ ಹಾಕಿ ಮೆರೆಸಿತಲ್ಲ ಮೋದಿ ಸರ್ಕಾರ ಅದೊಂದೇ ಕಾರಣಕ್ಕೆ ನನಗೆ ಅತೀವ ಸಿಟ್ಟು. ಸಣ್ಣ ಪುಟ್ಟ ಉದ್ಯಮಗಳನ್ನು ಉದ್ಯಮಿಗಳನ್ನು ಕೊಂದು ಸಾಮ್ರಾಜ್ಯ ಕಟ್ಟಿಬೆಳೆಸಿದ ಅಂಬಾನಿ – ಅದಾನಿಗಳಿಗೆ ರಾಷ್ಟ್ರಕ್ಕಾಗಿ ತನ್ನ ಲಾಭದ ಒಂದು ಪರ್ಸೆಂಟ್ ವಿನಿಯೋಗಿಸುವ ಔದಾರ್ಯವಿಲ್ಲವೆಂದರೆ ಇವರಿಂದ ಯಾರಿಗೆ ಪ್ರಯೋಜನವಿದೆ?
ಈ ಸ್ವಾರ್ಥಿಗಳ ಸಾಲ ಮನ್ನಾ ಮಾಡಿ, ಬ್ಯಾಂಕುಗಳನ್ನು ಮುಳುಗಿಸಿ ಈ ಕೃತಘ್ನರಿಗೆ ಅಷ್ಟೆಲ್ಲಾ ಸಹಾಯ ಮಾಡಬೇಕಿತ್ತಾ? ಅಷ್ಟಲ್ಲದೇ ದೊಡ್ಡವರು ಹೇಳಿಲ್ಲ ನಾಯಿ ಮೊಲೆಯಲ್ಲಿ ಹಾಲಿದ್ರೆ ದೇವರಿಗೇನು ದಿಂಡಿಗೆ. ಈ ದುಡ್ಡಿರುವ ದೊಡ್ಡವರ ಹೊಟ್ಟೆ ತಣ್ಣಗಿರಲಿ. ನಾವು ಬಡವರು ಸಂಕಷ್ಟಿತರ ಪರವಾಗಿ ನಿಲ್ಲೋಣ. ನಮ್ಮಲ್ಲಿನ್ನೂ ಮಾನವೀಯತೆ ಸತ್ತಿಲ್ಲವಲ್ಲ.
-ವಿಭಾ








