ಹತ್ತೊಂಬತ್ತನೇ ಶತಮಾನದ ಪ್ರಾರಂಭದ ಬ್ರಿಟೀಷರ ಔನ್ನತ್ಯದ ಕಾಲದಲ್ಲಿ ಹಿಂದು ಧರ್ಮದ ಅಸಮಾನತೆಯನ್ನೆ ದಾಳ ಮಾಡಿಕೊಂಡು ಮಿಷಿನರಿಗಳು ಕ್ರಿಶ್ಚಿಯನ್ ಧರ್ಮವನ್ನು ಅಪ್ಪಲು ಮಲೆನಾಡಿಗರನ್ನು ಪೂಸಲಾಯಿಸುತ್ತಿತ್ತು. ಮಲೆನಾಡಿನ ಅನ್ಯ ಸಮುದಾಯಗಳಿಗೂ ಶಿಕ್ಷಣದ ಹಕ್ಕನ್ನು ಕೊಡಿಸಲು ಪ್ರಯತ್ನಿಸುತ್ತಿದ್ದ ದೇವಂಗಿಯ ಸಾಹುಕಾರರನ್ನು ಒಪ್ಪಿಸಲು ಇದೆ ಸಂದರ್ಭದಲ್ಲಿ ಶತಪ್ರಯತ್ನ ಮಾಡಿತು.
ಎಲ್ಲವನ್ನೂ ತನ್ನ ಪರಿಧಿಯಲ್ಲಿ ಪರಾಮರ್ಶಿಸಿದ ದೇವಂಗಿಯ ರಾಮಣ್ಣ ಗೌಡರು ನಮ್ಮ ಹೋರಾಟ, ನಮ್ಮ ಧರ್ಮದೊಳಗಿನ ಅಸಮಾನತೆಯ ವಿರುದ್ದವೇ ಹೊರತೂ ಪರ ಧರ್ಮದ ಹಿಂದೆ ನಡೆಯಲು ಅಲ್ಲಾ, ನಮ್ಮಲಿರುವಷ್ಟೆ ಮೌಢ್ಯಗಳು ನಿಮ್ಮ ಧರ್ಮದಲ್ಲೂ ಇದೆ. ಹಾಗಾಗಿ ನಮಗೆ ಎಲ್ಲಾ ಸಮುದಾಯಗಳಿಗೆ ಶಿಕ್ಷಣ ನೀಡುವ ಶಾಲೆಗಳ ಅಗತ್ಯವಿದೆಯೇ ಹೊರತೂ ಪರಧರ್ಮದ ಅಗತ್ಯವಿಲ್ಲಾ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರು. ಅದೇ ಬ್ರಿಟೀಷರನ್ನೆ ಒಪ್ಪಿಸಿ ಅವರಲ್ಲೆ ಒಬ್ಬರನ್ನು ಶಿಕ್ಷಕರನ್ನಾಗಿ ನೇಮಿಸಿಕೊಂಡು ತನ್ನದೆ ವಿಶ್ರಾಂತಿ ಛತ್ರವನ್ನು ಶಾಲೆಯಾಗಿ ಪರಿವರ್ತಿಸಿ ಇತರೆ ಸಮುದಾಯಗಳಿಗು ಶಾಲಾ ಶಿಕ್ಷಣ ಸಿಗುವಂತೆ ಮಾಡಿದರು.
ನಂತರದ ದಿನಗಳಲ್ಲಿ ಮಲೆನಾಡು ಭಾಗದ ತೀರ್ಥಹಳ್ಳಿ ,ಕೊಪ್ಪ ,ನಗರ ಭಾಗದ ನಾಡವರನ್ನು ಸಂಘಟಿಸಿ ಮೈಸೂರು ಮಹಾರಾಜರಿಗೆ ಪತ್ರ ಮುಖೇನ ಸರ್ಕಾರಿ ಶಾಲೆಗಳನ್ನು ತೆರೆಯವ ಹಕ್ಕೊತ್ತಾಯ ಮಂಡಿಸಿದರು. ಬ್ರಿಟೀಷರು ಮತ್ತು ಕೆಲವೆ ಸಮುದಾಯಗಳಿಗೆ ಮೀಸಲಾಗಿದ್ದ ಶಿಕ್ಷಣವನ್ನು ಮಲೆನಾಡಿನ ಪ್ರತಿ ಮನೆ ಮನೆಯ ಬಾಗಿಲಿಗೂ ತಲುಪಿಸುವ ಕೈಂಕರ್ಯ ಕೈಗೊಂಡರು. ಸತತ ಹೋರಾಟದ ಫಲವಾಗಿ ಮೈಸೂರು ಅರಸರು 1901ರ ವೇಳೆಗೆ ಮಲೆನಾಡಿನ ಹಲವು ಭಾಗಗಳಲ್ಲಿ ಸರ್ಕಾರವೇ ಶಾಲೆ ತೆರೆಯುವ ನಿರ್ಧಾರ ಮಾಡಿಸುವಲ್ಲಿ ಸಾಹುಕಾರ ದೇವಂಗಿ ರಾಮಣ್ಣಗೌಡರು ಯಶಸ್ವಿಯಾದರು.
ಕುವೆಂಪುರರವು ದೇವಂಗಿ ರಾಮಣ್ಣಗೌಡರ ಬಗ್ಗೆ ಬರೆಯುವಾಗ ಒಬ್ಬ ದೇವಂಗಿ ರಾಮಣ್ಣಗೌಡರ ಗಟ್ಟಿ ನಿರ್ಧಾರದಿಂದ ಮಲೆನಾಡು ನಾಗಾಲ್ಯಾಂಡ್ ಆಗುವ ಸ್ಥಿತಿ ತಪ್ಪಿಹೋಯಿತು, ಇಡೀ ಮಲೆನಾಡಿಗರೆ ಇವರ ಬೆನ್ನ ಹಿಂದಿದ್ದಾಗ ಸಮಯೋಚಿತ ನಿರ್ಧಾರಗಳಿಂದ ಮಲೆನಾಡಿಗೆ ಶಿಕ್ಷಣದ ಅರಿವು ಮೂಡಿಸಿದ ಮಹಾನ್ ವ್ಯಕ್ತಿತ್ವ ಎಂದಿದ್ದಾರೆ.
ಶಿಕ್ಷಕರ ದಿನದಂದು ಮಲೆನಾಡಿನ ಎಲ್ಲಾ ಸಮುದಾಯಗಳಿಗೆ ಶಿಕ್ಷಣದ ಬಾಗಿಲು ತೆರೆಯಿಸಿದ ಮಲೆನಾಡಿನ ಶಿಕ್ಷಣ ಭೀಷ್ಮ ದೇವಂಗಿ ರಾಮಣ್ಣ ಗೌಡರನ್ನು ಪ್ರತಿ ಮಲೆನಾಡಿಗರು ನೆನಪಿಸಿಕೊಳ್ಳಲೇ ಬೇಕು..
(ದೇವಂಗಿ ರಾಮಣ್ಣ ಗೌಡರು ಕುವೆಂಪುರವರ ಧರ್ಮ ಪತ್ನಿ ಡಿ ಆರ್ ಹೇಮಾವತಿ ಮತ್ತು ಸ್ವಾತಂತ್ರ್ಯ ಸೇನಾನಿ ದೇವಂಗಿ ಮಾನಪ್ಪರವರ ತಂದೆ)
ಲೇಖನ:-
ಆದರ್ಶ ಹುಂಚದಕಟ್ಟೆ