ಇಲ್ಲಿ ನಾನು ಹೇಳುವ ಮಾತುಗಳನ್ನು ಕೊಂಚ ಎಕ್ಸ್ಟ್ರಾ ಎಚ್ಚರಿಕೆಯಿಂದ ಗಮನಿಸಿ. ಯಾಕಂದ್ರೆ ಒಬ್ಬ ಪತ್ರಕರ್ತನಾಗಿ ನಾನು ಈ ವಿಚಾರಗಳ ಬಗ್ಗೆ ಸಾಕಷ್ಟು ಯೋಚಿಸಿ ಎಕ್ಸ್ಟ್ರಾ ಎಚ್ಚರಿಕೆಯಿಂದಲೇ ಬರೆದಿದ್ದೇನೆ. ಕಳೆದ ಮೂರ್ನಾಲ್ಕು ದಿನಗಳಿಂದ ಹಲವು ಸಂಕಟಗಳ ಆಯಾಮಗಳು ನನ್ನ ಗಮನಕ್ಕೆ ಬಂದಿದೆ. ಸಾಮಾಜಿಕ ನ್ಯಾಯ ಅನ್ನುವುದು ಸಮಾನವಾಗಿ ಜ್ಯಾತ್ಯಾತೀತವಾಗಿ ಧರ್ಮಾತೀತವಾಗಿ ಹಂಚಿಕೆಯಾಗಬೇಕು ಎಂದು ಸಮರ್ಥಿಸಿಕೊಳ್ಳುವ ಪೈಕಿಯವ ನಾನು. ನನ್ನ ದೃಷ್ಟಿಯಲ್ಲಿ ಎಲ್ಲಾ ಧರ್ಮ ಜಾತಿ ವರ್ಗದವರೂ ಸಮಾನರೇ. ಓದುವ ಮೊದಲು ಪೂರ್ವಾಗ್ರಹಗಳಿದ್ದರೆ ಬದಿಯಿಟ್ಟು ಮಾನವೀಯತೆಯ ದೃಷ್ಟಿಕೋನವಿಟ್ಟು ಓದಿ.
ಸಂಕಟ-1: ಆತ ಅಡುಗೆ ಮಾಡುವ ಭಟ್ಟ. ಮದುವೆ, ಮುಂಜಿ, ಶ್ರಾದ್ಧ ಮುಂತಾದ ಸಮಾರಾಧನೆಗಳಿಗೆ ಅಡುಗೆ ಮಾಡಲು ಹೋಗುತ್ತಾನೆ. ಅದೇ ಅವನ ದುಡಿಮೆ ಅವನ ಬದುಕು ಅವನ ಅನ್ನ. ಕರೋನಾ ಬಂದ ನಂತರ ಅವನಿಗೆ ದುಡಿಮೆ ಇಲ್ಲ. ಅವನ ಹೆಸರು ಸುಬ್ಬ. ಬ್ರಾಹ್ಮಣರ ಯುವಕ. ಹೆಂಡತಿ ಗೃಹಿಣಿ, ಎರಡು ಮಕ್ಕಳಿವೆ. ಅವನಿಗೆ ಉಚಿತ ರೇಷನ್ ಯಾರೂ ಕೊಡಲಿಲ್ಲ. ತರಕಾರಿ ಸಿಗಲಿಲ್ಲ. ಖಾತೆಗೆ ಹಣ ಬರಲಿಲ್ಲ. ಹುಟ್ಟಿನಿಂದ ಅವನು ಮೇಲ್ವರ್ಗದವನು ಮತ್ತು ಬಿಪಿಎಲ್ ರೇಷನ್ ಕಾರ್ಡ್ ಅವನಿಗಿಲ್ಲ. ಯಾವುದೋ ಒಂದು ಪಕ್ಷದವರು ರೇಷನ್ ಹಂಚುತ್ತಿದ್ದರಂತೆ, ಅವನಿಗೆ ಕೇಳಲು ಸ್ವಾಭಿಮಾನ ಅಡ್ಡ ಬಂತು. ಸುಮ್ಮನೆ ಬಾಗಿಲ ಮುಂದೆ ನಿಂತಿದ್ದಂತೆ. ಹಂಚುತ್ತಿದ್ದವರು, ‘ಆ ಮನೆಗೆ ಬೇಡ ಅವರು ಬ್ರಾಮಂಡ್ರು ಅವರಿಗ್ಯಾಕೆ ಕೊಡಬೇಕು’ ಅಂದರಂತೆ. ಅವನ ಮನೆಯ ಅಡುಗೆ ಕೋಣೆಯಲ್ಲಿ ಸಾಮಗ್ರಿಗಳ ಡಬ್ಬಗಳು ಖಾಲಿಯಾಗಿದ್ದವು.
ಸಂಕಟ-2: ಅವರ ಹೆಸರು ದತ್ತಾತ್ರೇಯ ಭಟ್ಟರು (ಹೆಸರು ಬದಲಾಯಿಸಿದ್ದೇನೆ) ಅಷ್ಟೇನು ವಿದ್ಯಾವಂತರಲ್ಲದ ಅವರು ದೇವಸ್ಥಾನ ಒಂದರಲ್ಲಿ ರುದ್ರ ಪಾರಾಯಣ ಮಾಡಲು, ಹೋಮಗಳಿದ್ದಾಗ ಹೋಮಕುಂಡಕ್ಕೆ ತುಪ್ಪ ಮತ್ತು ಸಮಿತ್ತು ಹಾಕಲು ಸಹಾಯಕರಾಗಿ ಹೋಗುತ್ತಾರೆ ಮತ್ತು ಊಟದ ಮನೆಗಳಿದ್ದರೆ ತರಕಾರಿಗಳನ್ನು ಹೆಚ್ಚಿಕೊಡಲು ಹೋಗುತ್ತಾರೆ. ಒಂದಷ್ಟು ಪುಡಿಗಾಸು ಸಿಗುತ್ತದೆ. ಅವರ ಹೊತ್ತಿನ ಊಟಕ್ಕೇನೂ ತೊಂದರೆ ಇರಲಿಲ್ಲ. ಲಾಕ್ ಡೌನ್ ನಂತರ ದೇವಸ್ಥಾನ ಊಟದಮನೆ ಎಲ್ಲವೂ ಬಂದ್ ಆಯಿತು. ಒಂದಷ್ಟು ದಿನ ಮನೆಯಲ್ಲಿದ್ದ ವೃದ್ಧ ತಾಯಿ (ಮದುವೆ ಆಗದ ಬ್ರಹ್ಮಚಾರಿ ಅವರು) ಇದ್ದ ಅಕ್ಕಿಯಲ್ಲಿ ಗಂಜಿ ಬೇಯಿಸಿದರು ಉಪ್ಪು ಹಾಕಿ ಅಮ್ಮ ಮಗ ತಿಂದರು. ಬ್ರಾಹ್ಮಣ ಸಂಘದಿಂದ ಒಂದು ದಿನಸಿ ಕಿಟ್ ಸಹ ಸಿಕ್ಕಿ ಒಂದು ವಾರ ಬದುಕು ನಡೆಯಿತು. ಮೊನ್ನೆ ಯಾರೋ ರೇಷನ್ ಹಂಚುವಾಗ ಮುಖದ ಮೇಲೆ ಟವೆಲ್ ಸುತ್ತಿಕೊಂಡು ಸರದಿಯಲ್ಲಿ ನಿಂತರಂತೆ. ಅವರನ್ನು ಗುರುತಿಸಿದ ಒಬ್ಬ ‘ಏನ್ ಭಟ್ರೆ ತಟ್ಟೆಕಾಸು ಭರ್ಜರಿಯಾಗಿ ಮಾಡಿಕೊಂಡಿದ್ರೂ ಲೈನ್ ನಲ್ಲಿ ನಿಂತಿದ್ದೀರಲ್ರಿ. ನಾಚಿಕೆ ಆಗಲ್ವೇನ್ರಿ, ಶೂದ್ರರ ಅನ್ನವನ್ನೂ ಕಿತ್ಕೋತೀರಲ್ರೀ’ ಅಂತ ವ್ಯಂಗ್ಯ ಮಾಡಿದನಂತೆ. ಖಾಲಿ ಕೈನಲ್ಲಿ ವಾಪಾಸು ಬರುವಾಗ ಅವರಿಗೆ ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋಗುವ ಆಲೋಚನೆ ಬಂತಂತೆ. ಆದ್ರೆ ಮನೆಯಲ್ಲಿರುವ ವೃದ್ಧ ತಾಯಿಯ ನೆನಪಾಗಿ ಸುಮ್ಮನಾದರಂತೆ.
ಸಂಕಟ-3: ಕೇವಲ ಹೈಸ್ಕೂಲ್ ಕಲಿತ ಒಬ್ಬ ಗೆಳೆಯ ಅಷ್ಟೇನೂ ಬುದ್ದಿವಂತನಾಗಿರಲಿಲ್ಲ. ಊರಿನಲ್ಲಿ ಅವರಪ್ಪನಂತೆ ಪೌರೋಹಿತ್ಯ ಮಾಡಿಕೊಂಡಿದ್ದ ಜೊತೆಗೆ ಅಡುಗೆಗಳಿಗೂ ಹೊಗುತ್ತಿದ್ದ. ಮೊನ್ನೆ ಕಾಲ್ ಮಾಡಿದ್ದ. “ಮನೆಯಲ್ಲಿ ದಿನಸಿ ತರಕಾರಿ ಎಲ್ಲಾ ಖಾಲಿಯಾಗಿದೆ. ಬ್ಯಾಂಕ್ ಖಾತೆಯಲ್ಲಿ ಒಂದೇ ಒಂದು ರೂಪಾಯಿ ಹಣವಿಲ್ಲ. ಮದುವೆಯಾಗಿ 10 ವರ್ಷಗಳ ಬಳಿಕ ಹೆಂಡತಿ ಈಗ ಬಸುರಿ. ಅವಳಿಗೆ ಹೊಟ್ಟೆ ತುಂಬಾ ಊಟ ಹಾಕದೇ ವಾರದ ಮೇಲಾಯ್ತು. ದಿನವೂ ಪೂಜೆ ಪುನಸ್ಕಾರ ಮಾಡಿದ ದೇವರು ಇಂತಹ ಕಷ್ಟಕಾಲದಲ್ಲಿ ಕೈಹಿಡಿಯಲಿಲ್ಲ ಅಂದ ಮೇಲೆ ದೇವರ ಪೂಜೆ ಯಾಕೆ ಮಾಡಬೇಕು ಅಂತ ಬೆಳ್ಳಿಯ ದೇವರ ವಿಗ್ರಹ ಮಾರಾಟ ಮಾಡಲು ಹೋದೆ. ದೇವರ ಮೂರ್ತಿಗಳನ್ನು ಕೊಳ್ಳುವವರೂ ಇಲ್ಲ. ಯಾರ ಬಳಿಯಾದರೂ ಕಷ್ಟ ಹೇಳಿ ಕೈಚಾಚೋಣ ಅಂದ್ರೆ ಬಾಯಿ ಬರಲ್ಲ. ಸತ್ತೋಗಣ ಅನ್ನಿಸತ್ತೆ ಅಂತ ಅತ್ತ.
ಸಂಕಟ-4: “ಈ ದರಿದ್ರ ಕರೋನಾ ಬಂದು ದೇವಸ್ಥಾನ ಬಂದ್ ಆಯ್ತು. ನಮ್ಮದು ಮುಜರಾಯಿ ದೇವಸ್ಥಾನವೂ ಅಲ್ಲ. ಸರ್ಕಾರಿ ಸಂಬಳವೂ ಬರಲ್ಲ. ಮಂಗಳಾರತಿ ತಟ್ಟೆ ಕಾಸು ಹೊತ್ತಿನ ತುತ್ತಿನ ಚೀಲ ತುಂಬಿಸ್ತಿತ್ತು. ಮದುವೆಗೆ ಬಂದ ಮಗಳಿದ್ದಾಳೆ. ಮೈ ಮುಚ್ಚಲು ಒಳ್ಳೆ ಬಟ್ಟೆ ಇಲ್ಲ ಅವಳಿಗೆ. ಬ್ರಾಹ್ಮಣರಾಗಿ ಹುಟ್ಟುವುದು ವರ ಅಲ್ಲ ಕಣಾ ಶಾಪ” ಹೀಗಂತ ಹೇಳಿದ್ದು ಪರಿಚಯದ ಒಬ್ಬ ಅರ್ಚಕರು.
ಇವಿಷ್ಟು ಸಂಕಟ ನನ್ನ ಕಿವಿಗೆ ಬಿದ್ದಿರುವಂತದ್ದು. ನನಗೆ ತಿಳಿಯದ ಸಂಕಟದ ಆಯಾಮಗಳು ಇದಕ್ಕಿಂತ ಹತ್ತಾರು ಇವೆ. ಇಂತಹ ಹೇಳಿಕೊಳ್ಳದ ಸಮಸ್ಯೆಗಳಿರುವ ಸಾವಿರಾರು ಬ್ರಾಹ್ಮಣರು ರಾಜ್ಯದಲ್ಲಿದ್ದಾರೆ. ಇವರು ಜಾತಿಯಲ್ಲಿ ಮೇಲ್ವರ್ಗ ಆದರೆ ಹಣಕಾಸಿನ ವಿಚಾರದಲ್ಲಿ ಅತ್ಯಂತ ದರಿದ್ರರು. ಇವರಲ್ಲಿ ಬಹಳಷ್ಟು ಜನರಿಗೆ ರಾಜಕಾರಣ, ಇಸಮ್ಮು, ಪಕ್ಷ ಪಂಥ ಯಾವುದೂ ಗೊತ್ತಲ್ಲ. ಗೊತ್ತಿರುವುದು ಮಂತ್ರ ಹೇಳುವುದು, ಊಟದಮನೆಗಳಿದ್ದರೆ ಹೋಗಿ ಗಢದ್ದಾಗಿ ಉಂಡು ಬರುವುದು (ಅವರ ಬಡತನ ಎಷ್ಟೆಂದರೆ ಹೊಟ್ಟೆ ತುಂಬಾ ಉಣ್ಣುವುದೇ ಸಮಾರಂಭಗಳಲ್ಲಿ ಮಾತ್ರ) ಎಲಡಿಕೆ ಜಗಿಯುತ್ತಾ ಕೂರುವುದು, ಮಡಿ ಮೈಲಿಗೆ ಅಂತ ಗೊಣಗಾಡಿಕೊಂಡಿರುವುದು. ಇವರೆಲ್ಲರೂ ನಿರುಪದ್ರವಿಗಳು. ಸರ್ಕಾರ ಅಂತ ಒಂದಿದೆ ಅನ್ನುವುದು ಇವರಿಗೆ ಗೊತ್ತಾಗುವುದೇ ಚುನಾವಣೆ ಸಮಯದಲ್ಲಿ ಮಾತ್ರ. ಇವರಿಗೆ ಪರಿಚಯವರು ಯಾರೋ ಒಬ್ಬರು ಇಂತಹವರಿಗೆ ಓಟ್ ಒತ್ತಿ ಅಂದ್ರೆ ಒತ್ತಿ ಬರುತ್ತಾರಷ್ಟೆ. ಇಂತವರ ಪ್ರಮಾಣ ನಮ್ಮ ನಾಡಿನಲ್ಲಿ ಕೇವಲ 0.1% ಅಂದರೂ 10 ಸಾವಿರಕ್ಕಿಂತ ಹೆಚ್ಚಿದ್ದಾರೆ. ಆದರೆ ಇವರು ಈ ಜಗತ್ತಿನ ಅತ್ಯಂತ ದಟ್ಟ ದರಿದ್ರರು ಮತ್ತು ಕಟ್ಟಕಡೆಯ ನಿರ್ಗತಿಕರು. ಇವರು ತೊಟ್ಟ ಜನಿವಾರವೇ ಇವರಿಗೆ ಉರುಳು.
ಬ್ರಾಹ್ಮಣರಲ್ಲಿ ಕುತಂತ್ರಿಗಳಿದ್ದಾರೆ, ಅವಕಾಶವಾದಿಗಳಿದ್ದಾರೆ ಮತ್ತು ಶ್ರೇಷ್ಠತಾ ವ್ಯಸನದಿಂದ ಬಳಲುವವರಿದ್ದಾರೆ ಹೌದು. ಆದ್ರೆ ಇವರ್ಯಾರು ಆ ಪಟ್ಟಿಯಲ್ಲಿ ಸೇರುವುದಿಲ್ಲ. ಇವರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವುದಿಲ್ಲ. ಸಾಲಿನಲ್ಲಿ ನಿಂತು ಕೈಚಾಚುವುದಿಲ್ಲ. ಇವರ ಹಸಿದ ಹೊಟ್ಟೆ ಜಗತ್ತಿಗೆ ಕಾಣಿಸುವುದಿಲ್ಲ. ಇವರ ಪರವಾಗಿ ಯಾವ ಜೀವ ಪರರೂ ಬರೆಯುವುದಿಲ್ಲ. ಯಾವ ಸರ್ಕಾರಗಳಿಗೂ ಇವರು ಕಾಣಿಸುವುದಿಲ್ಲ. ಮಾನವೀಯತೆ ಅನ್ನುವುದು ನಿಜಕ್ಕೂ ಬದುಕಿದ್ದರೆ ಆರ್ಥಿಕವಾಗಿ ತಳಂಪಾತಾಳದಲ್ಲಿರುವ ಈ ದರಿದ್ರ ಸ್ಥಿತಿಯ ಬ್ರಾಹ್ಮಣರಿಗೆ ನೆರವು ಸಿಗಲಿ. ಸರ್ಕಾರದಿಂದಲಾದರೂ ಸರಿ, ಸಂಘ ಸಂಸ್ಥೆಗಳಿಂದಲಾದರೂ ಸರಿ. ಹೇಗೆ ಕರೋನಾ ಅಮರಿಕೊಳ್ಳಲು ಜಾತಿಯಿಲ್ಲವೋ ಹಾಗೆಯೇ ಹಸಿವಿಗೂ ಜಾತಿಯಿಲ್ಲ. ಬಡ ಬ್ರಾಹ್ಮಣರಿಗೆ ಹಸಿವು ತುಸು ಹೆಚ್ಚೇ.
ವಿ.ಸೂ: ಇಷ್ಟನ್ನು ಬರೆಯುವಾಗ ನಾನು ನನ್ನ ಜಾತಿಯನ್ನು ಮರೆತು ಅಪ್ಪಟ ಮಾನವತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದಿದ್ದೇನೆ. ಇಷ್ಟಾದ ಮೇಲೂ ಜನೀವಾರ ಪನೀವಾರ ಅದೂ ಇದೂ ಅಂತ ನೀವಂದರೆ ಲೀಸ್ಟ್ ಬಾದರ್ಡ್ ಎಬೌಟ್ ಯುವರ್ ವರ್ಡ್ಸ್; ಗೆಟ್ ಲಾಸ್ಟ್. ನ್ಯಾಯ, ನೀತಿ ನಿಯಮ, ಧರ್ಮ ಸತ್ಯ ಮತ್ತು ಸಮಾನತೆ ಎಲ್ಲರಿಗೂ ಒಂದೇ. ಬ್ರಾಹ್ಮಣರಾಗಿ ಹುಟ್ಟಿದ ಮಾತ್ರಕ್ಕೆ ಅವರನ್ನು ಗಣನೆಗೆ ತೆಗೆದುಕೊಳ್ಳಬಾರದು ಎನ್ನುವ ಡಬಲ್ ಸ್ಟ್ಯಾಂಡರ್ಡ್ ನಾನಲ್ಲ.
-ವಿಭಾ








