ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಲು ತೀವ್ರ ಕಸರತ್ತು ನಡೆಸಿದ್ದ ಹಳ್ಳಿಹಕ್ಕಿ ಖ್ಯಾತಿಯ ಮಾಜಿ ಸಚಿವ ಹೆಚ್.ವಿಶ್ವನಾಥ್‍ಗೆ ಹೈಕೋರ್ಟ್ ಬಿಗ್ ಶಾಕ್ ಕೊಟ್ಟಿದೆ.

ಸಂವಿಧಾನಬದ್ಧವಾಗಿ ಹೆಚ್.ವಿಶ್ವನಾಥ್ ಆಯ್ಕೆಯಾಗದ ಹಿನ್ನೆಲೆಯಲ್ಲಿ ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹರಾಗಿದ್ದಾರೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಮಧ್ಯಂತರ ಆದೇಶ ನೀಡಿದೆ. ಆದರೆ, ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಗೆ ಹೈಕೋರ್ಟ್ ರಿಲೀಫ್ ಕೊಟ್ಟಿದೆ.
ಏನಿದು ಪ್ರಕರಣ…?
ಕಾಂಗ್ರೆಸ್, ಜೆಡಿಎಸ್‍ನಿಂದ ಶಾಸಕರಾಗಿ ಆಯ್ಕೆಯಾಗಿ ಆಪರೇಷನ್ ಕಮಲಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಸೇರಿದಂತೆ 17 ಶಾಸಕರನ್ನು ಹಿಂದಿನ ಸ್ಪೀಕರ್ ರಮೇಶ್ ಕುಮಾರ್ 2023ರವರೆಗೆ ಅನರ್ಹಗೊಳಿಸಿದ್ದರು. ಸುಪ್ರೀಂಕೋರ್ಟ್ ಕೂಡ ಶಾಸಕರ ಆನರ್ಹತೆ ಆದೇಶ ಎತ್ತಿ ಹಿಡಿದಿತ್ತು. ಇವರು ಮತ್ತೆ ಸಚಿವ ಸಂಪುಟ ಸೇರಬೇಕಾದರೆ ಸಂವಿಧಾನಬದ್ಧವಾಗಿ ಚುನಾವಣೆಯಲ್ಲಿ ಆಯ್ಕೆಯಾಗಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಸೋಲು ಅನುಭವಿಸಿದ್ದರು. ಆರ್.ಶಂಕರ್ ಚುನಾವಣೆಗೆ ಸ್ಪರ್ಧೆ ಮಾಡಿರಲಿಲ್ಲ. ಹೀಗಾಗಿ ಸಚಿವ ಸ್ಥಾನ ಪಡೆಯಬೇಕಾದರೆ ವಿಧಾನಪರಿಷತ್‍ಗೆ ಆಯ್ಕೆಯಾಗಬೇಕಿತ್ತು.

ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಅವರನ್ನು ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಆದರೆ, ವಿಶ್ವನಾಥ್‍ಗೆ ಟಿಕೆಟ್ ಸಿಗದ ಕಾರಣ ಸಾಹಿತ್ಯ ಕೋಟಾದಲ್ಲಿ ನೇರವಾಗಿ ವಿಧಾನಪರಿಷತ್‍ಗೆ ನಾಮಕರಣ ಮಾಡಲಾಗಿತ್ತು.
ಹೆಚ್.ವಿಶ್ವನಾಥ್, ಆರ್.ಶಂಕರ್, ಎಂಟಿಬಿ ನಾಗರಾಜ್‍ರ ಅನರ್ಹತೆಯನ್ನು ಪರಿಗಣಿಸಿ ಸಚಿವ ಸ್ಥಾನ ಪಡೆಯದಂತೆ ಆದೇಶ ನೀಡಬೇಕು ಎಂದು ವಕೀಲರಾದ ಎ.ಎಸ್ ಹರೀಶ್, ಜಿ.ಮೋಹನ್ ಕುಮಾರ್ ಹೈಕೋರ್ಟ್‍ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಓಕಾ, ನ್ಯಾ.ವಿಶ್ವಜಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಹೆಚ್.ವಿಶ್ವನಾಥ್ ಸಾಂವಿಧಾನಿಕ ಚುನಾವಣೆ ಮೂಲಕ ವಿಧಾನಪರಿಷತ್‍ಗೆ ಆಯ್ಕೆಯಾಗಿಲ್ಲ. ನಾಮನಿರ್ದೇಶನದ ಮೂಲಕ ವಿಧಾನಪರಿಷತ್‍ಗೆ ನೇಮಕಗೊಂಡಿದ್ದಾರೆ. ಹೀಗಾಗಿ 2021ರವರೆಗೆ ಸಂವಿಧಾನದ ಕಲಂ 164(1ಬಿ), 361ಬಿ ಅಡಿ ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹರು. ಮುಖ್ಯಮಂತ್ರಿಗಳು ವಿಶ್ವನಾಥ್‍ರ ಅನರ್ಹತೆ ಪರಿಗಣಿಸಬೇಕು ಎಂದು ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ.

ಆದರೆ, ವಿಧಾನಸಭೆಯಿಂದ ನಡೆದ ಚುನಾವಣೆ ಮೂಲಕ ಎಂಟಿಬಿ ನಾಗರಾಜ್, ಆರ್.ಶಂಕರ್ ಆಯ್ಕೆಯಾಗಿರುವುದರಿಂದ ಇಬ್ಬರೂ ಸಚಿವರಾಗಲು ಅಡ್ಡಿ ಇಲ್ಲ ಎಂದು ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ಹೀಗಾಗಿ ಸಚಿವರಾಗಬೇಕೆಂದು ಕಳೆದ ಒಂದು ವರ್ಷದಿಂದ ಹಪಹಪಿಸುತ್ತಿದ್ದ ಹೆಚ್.ವಿಶ್ವನಾಥ್‍ರ ಕನಸಿಗೆ ಹೈಕೋರ್ಟ್ ಕೊಳ್ಳಿ ಇಟ್ಟಿದೆ ಎಂದರೆ ತಪ್ಪಾಗಲಾರದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








