ಹಂಸಲೇಖಗೆ ನಿರಾಳ ನೀಡಿದ ಹೈಕೋರ್ಟ್ ಆದೇಶ
ಪೇಜಾವರ ಶ್ರೀಗಳ ಬಗ್ಗೆ ನೀಡಿದ್ದ ಹೇಳಿಕೆ ಸಂಬಂಧ ಸಂಗೀತ ನಿರ್ದೇಶಕ, ಚಿತ್ರಸಾಹಿತಿ ಹಂಸಲೇಖ ವಿರುದ್ಧ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ಹಂಸಲೇಖ ಅವರು ಕಾರ್ಯಕ್ರಮವೊಂದರಲ್ಲಿ ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿದ್ದು ದೊಡ್ಡ ವಿವಾದವಾಗಿತ್ತು. ಹಂಸಲೇಖ ವಿರುದ್ಧ ಬ್ರಾಹ್ಮಣ ಮಹಾಸಭಾ ಸೇರಿದಂತೆ ಇನ್ನೂ ಕೆಲವರು ನಗರದ ಬಸವನಗುಡಿ ಪೆÇಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಆದರೆ ಈ ಪ್ರಕರಣದಲ್ಲಿ ಹಂಸಲೇಖ ವಿರುದ್ಧ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.
ಹಂಸಲೇಖ ವಿರುದ್ಧದ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣದ ತನಿಖೆಗೆ ಸದ್ಯಕ್ಕೆ ತಡೆ ನೀಡಿದೆ. ಇದರಿಂದ ನಾದಬ್ರಹ್ಮ ಹಂಸಲೇಖ ಅವರಿಗೆ ಕೊಂಚ ನಿರಾಳ ಸಿಕ್ಕಂತಾಗಿದೆ.
ಕೆಲ ದಿನಗಳಿಂದ ಹಿಂದೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಂಸಲೇಖ ಅವರು, ”ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋದರು ಎಂಬುದು ಬಹಳ ಸುದ್ದಿಯಾಗಿತ್ತು. ದಲಿತರ ಮನೆಗೆ ಹೋಗಿ ಪೇಜಾವರ ಸ್ವಾಮಿಗಳು ಅಲ್ಲಿ ಕುಳಿತಿದ್ದರಷ್ಟೆ, ಅವರು ಕೋಳಿ ಕೊಟ್ಟರೆ ತಿನ್ನಲಿಕ್ಕಾಗುತ್ತದೇನು? ಕುರಿ ರಕ್ತದ ಫ್ರೈ ಮಾಡಿಕೊಟ್ಟಿದ್ದರೆ ಅವರು ತಿನ್ನುತ್ತಿದ್ದರೇನು? ಲಿವರ್ ಫ್ರೈ ಕೊಟ್ಟಿದ್ದರೆ ತಿನ್ನುತ್ತಿದ್ದರೇನು?” ಎಂದು ಲೇವಡಿ ಮಾಡಿದ್ದರು.
ಅಲ್ಲದೇ ದಲಿತರ ಮನೆಗೆ ಮೇಲ್ಜಾತಿಯವರು ಹೋದರೂ ಅಲ್ಲಿಯೂ ಅವರು ಮೇಲ್ಜಾತಿಯವರಾಗಿಯೇ ವರ್ತಿಸುತ್ತಾರೆ ಎಂಬುದನ್ನು ಹಂಸಲೇಖ ತಮಾಷೆಯಾಗಿ ಹೇಳಿದ್ದರು.
ಹಂಸಲೇಖ ಅವರ ಈ ಹೇಳಿಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಹಾಗೇ ತೀವ್ರ ವಿವಾದವನ್ನೂ ಕೂಡ ಸೃಷ್ಠಿಸಿತ್ತು. ಬ್ರಾಹ್ಮಣ ಸಮುದಾಯ ಹಾಗೂ ಪೇಜಾವರ ಶ್ರೀಗಳ ಭಕ್ತರು ಹಂಸಲೇಖರ ಮಾತನ್ನು ತೀವ್ರವಾಗಿ ಖಂಡಿಸಿದ್ದರು. ಜೊತೆಗೆ ಪೊಲೀಸ್ ಠಾಣಾ ಮೆಟ್ಟಲು ಕೂಡ ಹೇರಿದ್ದರು.