ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ನಡೆದ ಕೋಮುಗಲಭೆ ಪ್ರಕರಣದಲ್ಲಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕುಟುಂಬಸ್ಥರು ಠಾಣೆಯ ಮುಂದೆ ಹೈಡ್ರಾಮಾ ನಡೆಸಿ, ನಮ್ಮವರನ್ನು ಬಿಡುವಂತೆ ಮನವಿ ಮಾಡಿದ್ದಾರೆ.
ನಾಗಮಂಗಲ ನಗರ ಪೊಲೀಸ್ ಠಾಣೆ ಎದುರು ನೂರಾರು ಜನ ಮಹಿಳೆಯರು ತಮ್ಮ ಮಕ್ಕಳನ್ನು ವಶಕ್ಕೆ ಪಡೆದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳನ್ನು ತೋರಿಸಿ, ಅವರನ್ನು ಬಿಡುಗಡೆ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಹಲವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಮಹಿಳೆಯರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಪೊಲೀಸ್ ಠಾಣೆ ಎದುರು ಮಹಿಳೆಯರಿಂದ ದಿಢೀರ್ ಪ್ರತಿಭಟನೆ ನಡೆದಿದ್ದು, ಠಾಣೆಯ ಎದುರಿನ ರಸ್ತೆಯಲ್ಲಿ ಧರಣಿ ಕುಳಿತು ಪ್ರತಿಭಟಿಸುತ್ತಿದ್ದಾರೆ. ಈ ವೇಳೆ ಪೊಲೀಸರು ವಿಚಾರಣೆ ನಡೆಸುತ್ತಿದ್ದೇವೆ. ತಪ್ಪು ಮಾಡದವರನ್ನು ಬಿಟ್ಟು ಕಳುಹಿಸುತ್ತೇವೆ ಎಂದಿದ್ದಾರೆ. 144 ಸೆಕ್ಷನ್ ಜಾರಿಯಾಗಿದ್ದು, ಗುಂಪುಗೂಡದೆ ಮನೆಗೆ ತೆರಳಿ ಎಂದು ಮಹಿಳೆಯರನ್ನು ಕಳಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ ಸುಮಾರು 50 ಜನರನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.