ಗಡಿಯಲ್ಲಿ ಕಮ್ಯೂನಿಸ್ಟ್ ದೇಶ ಚೀನಾ ತನ್ನ ಅಧಿಕ ಪ್ರಸಂಗವನ್ನು ಮುಂದುವರಿಸಿದೆ. ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಸೇರಿದ ಹೆಲಿಕಾಪ್ಟರ್ ವೊಂದು ಲಡಾಖಿನ ಗಡಿಯಲ್ಲಿ ಸದ್ದು ಮಾಡಿದೆ. ಚೀನಾದ ಮಿಲಿಟರಿ ವಿಮಾನ ವಾಸ್ತವಿಕ ಗಡಿ ರೇಖೆಗೆ ಹತ್ತಿರದಲ್ಲಿ ಹಾರಾಟ ನಡೆಸಿದ್ದು, ಇದರ ಶಬ್ದ ಕೇಳುತ್ತಲೇ ಭಾರತೀಯ ವಾಯುಸೇನೆ ಅಲರ್ಟ್ ಆಗಿದೆ. ಕೂಡಲೇ ಲಡಾಖ್ ನ ಲೇಹ್ ಏರ್ ಬೇಸ್ ನಿಂದ ಸುಖೋಯ್ 30 ಎಂಕೆಐ ವಿಮಾನದ ನೇತೃತ್ವದಲ್ಲಿ ಪೆಟ್ರೋಲಿಂಗ್ ಆರಂಭಿಸಿದೆ. ಮೂರು ವಿಮಾನಗಳು ಗಡಿಯಲ್ಲಿ ಪೆಟ್ರೋಲಿಂಗ್ ನಡೆಸಿವೆ. ಈ ಹಿನ್ನೆಲೆಯಲ್ಲಿ ಚೀನಾ ಹೆಲಿಕಾಪ್ಟರ್ ವಾಪಸ್ ತೆರಳಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಕಾರಣ ಏನಾಗಿರಬಹುದು?
ಕೊರೊನಾ ಸೋಂಕು ವಿಚಾರವಾಗಿ ಚೀನಾ ವಿರುದ್ಧ ಅಮೆರಿಕಾ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ರಾಷ್ಟ್ರಗಳು ಬುಸುಗುತ್ತಾ ತಿರುಗಿಬಿದ್ದಿವೆ. ಮೇಲಾಗಿ ತನ್ನ ಮಿತ್ರ ರಾಷ್ಟ್ರಗಳೇ ಡ್ರಾಗನ್ ರಾಷ್ಟ್ರದಿಂದ ತಮ್ಮ ತಮ್ಮ ಉದ್ದಿಮೆಗಳನ್ನು ಬೇರೆಡೆಗೆ ಶಿಫ್ಟ್ ಮಾಡಲು ಮುಂದಾಗಿವೆ. ಇದರಲ್ಲಿ ಹಲವು ರಾಷ್ಟ್ರಗಳು ಭಾರತದತ್ತ ಮುಖ ಮಾಡುತ್ತಿವೆ. ಇದೇ ಕಾರಣಕ್ಕಾಗಿ ಚೀನಾದ ಗಡಿ ಭಾಗದಲ್ಲಿ ಆಕ್ರಮಣಕಾರಿ ನೀತಿಯನ್ನು ಅನುಸರಿಸುತ್ತಿದೆ ಎನ್ನಲಾಗುತ್ತಿದೆ.
ಮೊನ್ನೆಯಷ್ಟೇ ಲಡಾಖ್ ಹಾಗೂ ನಕುಲಾ ಸೆಕ್ಟರ್ ನಲ್ಲಿ ವಾಸ್ತವಿಕ ಗಡಿ ರೇಖೆ ಬಳಿ, ಭಾರತೀಯ ಸೈನಿಕರ ಜೊತೆ, ಚೀನಾದ ಆರ್ಮಿ ಕಿರಿಕ್ ತೆಗೆದಿತ್ತು. ಈ ವೇಳೆ ದೇಶದ ಯೋಧರು, ಚೀನಿಗರ ವಿರುದ್ಧ ಸಂಘರ್ಷಕ್ಕೆ ಇಳಿದಿದ್ದರು.








