ಲಾಕ್ ಡೌನ್ – ಬಡವರಿಗೆ ಆಹಾರ ಒದಗಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು : ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..
ಮತ್ತೊಂದೆಡೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿದ್ದು, ಅನೇಕ ಬಡವರು ಆಹಾರ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ತಕ್ಷಣವೇ ಬಡವರಿಗೆ ಆಹಾರ ಭದ್ರತೆ ಒದಗಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. ಈ ಕುರಿತು ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸೂಚನೆ ನೀಡಿದೆ.
ದಿನಗೂಲಿ ಕಳೆದುಕೊಂಡವರಿಗೂ ಆಹಾರ ಭದ್ರತೆ ಒದಗಿಸಿ, ಗ್ರಾಮಾಂತರ ಪ್ರದೇಶಗಳಿಗೂ ಆಹಾರ ತಲುಪಿಸಿ, ದಾಸೋಹ ಹೆಲ್ಪ್ ಲೈನ್ ಮರು ಆರಂಭಿಸಿ ಎಂದು ಸರಕಾರಕ್ಕೆ ಸೂಚನೆ ನೀಡಿದೆ. ಪೀಠಕ್ಕೆ ಮಾಹಿತಿ ನೀಡಿದ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಆಹಾರ ವಿತರಣೆ ಮಾಡಲಾಗುತ್ತಿದೆ. ಮೂರು ಹೊತ್ತು ಉಚಿತ ಆಹಾರ ಒದಗಿಸಲಾಗುವುದು. 10 ಕೆಜಿ ಪಡಿತರ ಧಾನ್ಯ ಒದಗಿಸಲಾಗುವುದು. ಎನ್‍ಜಿಒಗಳ ಮೂಲಕವೂ ಆಹಾರ ಒದಗಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದ ಬಳಿಕ ನ್ಯಾಯಾಲಯವು ಈ ಕ್ರಮ ಕೈಗೊಂಡಿದೆ..








