Hijab | ಕೋಮುಸಂಘರ್ಷ ಹುಟ್ಟುಹಾಕುತ್ತಿರುವವರ ವಿರುದ್ಧ ಕ್ರಮಕ್ಕೆ ಸಿದ್ದು ಆಗ್ರಹ hijab-controversy siddaramaiah reaction blames bjp saaksha tv
ಬೆಂಗಳೂರು : ಎಸ್ ಡಿಪಿಐಯೋ, ಸಿಎಫ್ಐಯೋ ವಿದ್ಯಾರ್ಥಿಗಳ ನಡುವೆ ಕೋಮುಸಂಘರ್ಷ ಹುಟ್ಟುಹಾಕುತ್ತಿರುವವರು ಯಾರೇ ಇರಲಿ, ಅಂತಹವರನ್ನು ಗುರುತಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಹಿಜಾಬ್ ವಿವಾದದ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ತಿಂಗಳ ಹಿಂದೆಯೇ ಹುಟ್ಟಿಕೊಂಡಿದ್ದ ಹಿಜಾಬ್-ಕೇಸರಿ ಶಾಲು ವಿವಾದ ಹೊತ್ತಿ ಉರಿಯತೊಡಗಿದ ನಂತರ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಿಜಾಬ್-ಕೇಸರಿ ಶಾಲು ವಿವಾದದ ಹಿಂದೆ ಯಾರಿದ್ದಾರೆಂದು ಬಿಜೆಪಿ ಸರ್ಕಾರ ತನಿಖೆ ನಡೆಸಿ ಪತ್ತೆಹಚ್ಚಿ ಜನರಿಗೆ ತಿಳಿಸಲಿ.
ವಿವಾದದ ಮುಂದೆ ಯಾರಿದ್ದಾರೆ ಎನ್ನುವುದನ್ನು ರಾಜ್ಯ,ದೇಶ,ವಿದೇಶದ ಜನತೆ ಲೈವ್ ವಿಡಿಯೋಗಳಲ್ಲಿ ನೋಡುತ್ತಿದ್ದಾರೆ. ಅವರ ವಿರುದ್ದ ಕ್ರಮ ಯಾವಾಗ? ಅವರಿಗೆ ಇದರ ಹಿಂದೆ ಎಸ್ ಡಿಪಿಐ- ಸಿಎಫ್ ಐ ಇರಬಹುದೆಂಬ ಶಂಕೆ ಮೂಡಿದೆಯಂತೆ.ಇಲ್ಲಿಯ ವರೆಗೆ ಇವರ ಗೃಹಸಚಿವರು,ಪೊಲೀಸರು, ಇಂಟಲಿಜೆನ್ಸ್ ಏನು ಮಾಡ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ಗೃಹಸಚಿವ ಅರಗ ಜ್ಞಾನೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಬಿಜೆಪಿ ನಾಯಕರು ಹಿಜಾಬ್-ಕೇಸರಿ ಶಾಲು ವಿವಾದದ ಹಿಂದೆ ಕಾಂಗ್ರೆಸ್ ಇದೆ ಎನ್ನುತ್ತಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸಿಎಫ್ ಐ ಮೇಲೆ ಶಂಕೆಯಂತೆ. ಮೊದಲು ಎಲ್ಲರೂ ಕೂಡಿ ಒಂದು ತೀರ್ಮಾನಕ್ಕೆ ಬರುವುದು ಒಳ್ಳೆಯದು.
ಎಸ್ ಡಿಪಿಐಯೋ, ಸಿಎಫ್ಐಯೋ ವಿದ್ಯಾರ್ಥಿಗಳ ನಡುವೆ ಕೋಮುಸಂಘರ್ಷ ಹುಟ್ಟುಹಾಕುತ್ತಿರುವವರು ಯಾರೇ ಇರಲಿ, ಅಂತಹವರನ್ನು ಗುರುತಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ.ಇನ್ನೂ ಶಂಕೆ-ಅನುಮಾನ ಎಂದು ಕಾಲಹರಣ ಯಾಕೆ ಮಾಡುತ್ತೀರಿ? ಆರೋಪಿಗಳ ಜೊತೆ ಏನಾದರೂ ಒಳಒಪ್ಪಂದ ನಡೆದಿದೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ಧಾರಣೆಯ ಸರಿ-ತಪ್ಪು ಬಗ್ಗೆ ನ್ಯಾಯಾಲಯ ನಿರ್ಧರಿಸಲಿ, ಅಲ್ಲಿಯ ವರೆಗೆ ಕಾಯೋಣ. ಆದರೆ ವಿದ್ಯಾರ್ಥಿನಿಗಳ ಮೇಲೆ ಹಲ್ಲೆಗೆ ಪ್ರಯತ್ನ, ಶಾಲೆಗೆ ಕಲ್ಲೆಸೆತ, ರಾಷ್ಟ್ರಧ್ವಜ ಸ್ತಂಭದಲ್ಲಿ ಕೇಸರಿ ಬಾವುಟ ಅಪರಾಧ ಹೌದಾದರೆ ಮೊದಲು ಈ ಪುಂಡು ವಿದ್ಯಾರ್ಥಿಗಳ ಮೇಲೆ ಕ್ರಮಕೈಗೊಳ್ಳಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.









