ಇಂದು ಹೈಕೋರ್ಟ್ನಲ್ಲಿ ಹಿಜಾಬ್ ಪ್ರಕರಣದ ತೀರ್ಪು? Saaksha Tv
ಬೆಂಗಳೂರು : ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ಹಿಜಾಬ್ ವಿವಾದ ಹೈಕೋರ್ಟ್ ಮೆಟ್ಟಿಲೇರಿದ್ದು, ಮಂಗಳವಾರ ವಿಚಾರಣೆ ನಡೆಸಿ. ಹೈಕೋರ್ಟ್ ವಿಚಾರಣೆಯನ್ನು ಇಂದಿಗೆ ಮುಂದೂಡಿದೆ.
ಇಂದು ನ್ಯಾಯಾಲಯದಲ್ಲಿ ಹಿಜಾಬ್ ವಿವಾದ ಇತ್ಯರ್ಥವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂದು ಹಿಜಾಬ್ ಪ್ರಕರಣ ಸಂಬಂಧ ಹೈಕೋರ್ಟ್ನಿಂದ ಮಹತ್ವದ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಹಿಜಾಬ್ ಪ್ರಕರಣದ ವಿಚಾರಣೆಯನ್ನು ಇಂದು ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ.
ಪ್ರಕರಣ ಸಂಬಂಧ ನಿನ್ನೆ ನ್ಯಾಯಾಧೀಶರು ವಾದ-ಪ್ರತಿವಾದ ಆಲಿಸಿದ್ದಾರೆ. ನಿನ್ನೆ ವಿಚಾರಣೆಯಲ್ಲಿ ಯುವತಿ ಪರವಾಗಿ ವಕೀಲ ದೇವದತ್ ಕಾಮತ್ ವಾದ ಮಂಡನೆ ಮಾಡಿದರೆ, ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ವಾದ ಮಂಡಿಸಿದ್ದಾರೆ. ದೇವದತ್ ಕಾಮತ್ ಕೇರಳ, ಮದ್ರಾಸ್ ಹಾಗೂ ಮಹಾರಾಷ್ಟ್ರ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ, ಹಿಜಾಬ್ ಧರಿಸೋದು ಮುಸ್ಲಿಂ ಸಂಸ್ಕೃತಿ, ಅದಕ್ಕೆ ಅವಕಾಶ ಕೊಡಬೇಕು ಅಂತ ವಾದ ಮಂಡಿಸಿದ್ದರು. ಇಂದೂ ಸಹ ನ್ಯಾಯಾಧೀಶರು ವಾದ ಮಂಡನೆಗೆ ಅವಕಾಶ ನೀಡಲಿದ್ದಾರೆ. ವಾದ ಮಂಡನೆ ಬಳಿಕ ತೀರ್ಪು ಪ್ರಕಟ ಮಾಡುವ ಸಾಧ್ಯತೆ ಇದೆ.
ಇನ್ನು, ರಾಜ್ಯದಲ್ಲಿ ಹಿಜಾಬ್ ವಿವಾದ ತೀವ್ರ ಸ್ವರೂಪ ಪಡೆದಿರುವ ಹಿನ್ನೆಲೆ, ಈಗಾಗಲೇ ಶಾಲಾ-ಕಾಲೇಜುಗಳಿಗೆ 3 ದಿನ ರಜೆ ನೀಡಿ ಸಿಎಂ ಬಸವರಾಜ್ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯಾದ್ಯಂತ ಖಾಕಿ ಪಡೆ ಫುಲ್ ಅಲರ್ಟ್ ಆಗಿದೆ. ಶಾಲಾ-ಕಾಲೇಜುಗಳ ಬಳಿ ಗಸ್ತು ತಿರುಗುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾರೀ ಮುಂಜಾಗ್ರತೆ ವಹಿಸಲಾಗಿದೆ.
ಅಲ್ಲದೇ ರಾಜ್ಯ ಗುಪ್ತಚರ ಇಲಾಖೆ ಫುಲ್ ಅಲರ್ಟ್ ಆಗಿದ್ದು, ಪ್ರತಿಯೊಂದು ಮಾಹಿತಿಯನ್ನು ಗೃಹ ಸಚಿವರಿಗೆ ನೀಡುತ್ತಿದೆ. ಅಗತ್ಯ ಇರುವ ಜಿಲ್ಲೆಗಳಲ್ಲಿ 144 ಸೆಕ್ಷನ್ ಹಾಕಲು ಸರ್ಕಾರ ಚಿಂತನೆ ನಡೆಸಿದೆ. ಕಾನೂನು ಸುವ್ಯವಸ್ಥೆ ಹಾಳಾಗದಂತೆ ಸದಾ ಅಲರ್ಟ್ ಆಗಿ ಇರುವಂತೆ ಡಿಜಿ ಐಜಿ ಪ್ರವೀಣ್ ಸೂದ್ ರಾಜ್ಯದ ಎಲ್ಲಾ ಎಸ್ ಪಿಗಳಿಗೆ ಸೂಚನೆ ನೀಡಿದ್ದಾರೆ.