ವಿಜಯಪುರ: ರಾಜ್ಯ ಸರ್ಕಾರ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಬಿಪಿಎಲ್ ಕಾರ್ಡ್ (BPL Card) ಗಳನ್ನು ರದ್ದು ಮಾಡಲಾಗುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರೀ ಹಿಂದೂಗಳ ರೇಷನ್ ಕಾರ್ಡ್ ರದ್ದಾಗುತ್ತಿವೆ. ಟಾರ್ಗೆಟ್ ಮಾಡಿಯೇ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದಾರೆ. ಹೀಗಾಗಿ ನಾವು ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಹಿಂದೂಗಳನ್ನ ಟಾರ್ಗೆಟ್ ಮಾಡುತ್ತಿದೆ. ಯಾರಿಗೆ ಅನ್ಯಾಯವಾಗಿದೆ ಅವರ ಪರ ಸದನದಲ್ಲಿ ಧ್ವನಿ ನಾವು ಎತ್ತುತ್ತೇವೆ. ಮೊದಲು ಮಾಹಿತಿ ಪಡೆಯುತ್ತೇವೆ. ಪ್ಯಾನ್ ಕಾರ್ಡ್ ಅಪ್ಲಿಕೇಶನ್ ಹಾಕಿದವರ ರೇಷನ್ ಕಾರ್ಡ್ ರದ್ದಾಗಿವೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಪ್ರಸ್ತಾಪವಾಗುತ್ತಿದೆ. ರದ್ದಾದ ಗ್ರಾಹಕರ ಯಾದಿ ತೆಗೆದುಕೊಳ್ಳುತ್ತೇವೆ. ಇದನ್ನು ಇಟ್ಟುಕೊಂಡು ಅಧಿವೇಶನದಲ್ಲಿ ಧರಣಿ ಮಾಡುತ್ತೇವೆ. ಹಿಂದೂಗಳಿಗೆ ರೇಷನ್ ಕಾರ್ಡ್ ರದ್ದಾದರೆ, ನಾವು ಸುಮ್ಮನಿರುವುದಿಲ್ಲ ಎಂದಿದ್ದಾರೆ.








