ಬಾಂಗ್ಲಾದೇಶದಲ್ಲಿ ಹಿಂದೂಗಳು ಸಮಾನರು; ಅಲ್ಪಸಂಖ್ಯಾತರೆಂದು ಭಾವಿಸಬೇಡಿ – ಪ್ರಧಾನಿ ಶೇಖ್ ಹಸೀನಾ
ಬಾಂಗ್ಲಾದೇಶದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ ಎಂದು ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಹಿಂದೂಗಳು ತಮ್ಮನ್ನು ಅಲ್ಪಸಂಖ್ಯಾತರು ಎಂದು ಭಾವಿಸಬಾರದು ಎಂದು ಹೇಳಿದ್ದಾರೆ. ದೇಶದಲ್ಲಿ ಧರ್ಮ ಭೇದವಿಲ್ಲದೆ ಎಲ್ಲರೂ ಸಮಾನ ಹಕ್ಕುಗಳನ್ನ ಅನುಭವಿಸಬಹುದು. ಆದರೆ, ಯಾವುದೇ ಸಣ್ಣ ದಾಳಿ ನಡೆದಾಗ ದೇಶದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂಬ ಅಪಪ್ರಚಾರ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅವರು ಢಾಕೇಶ್ವರಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಚುವಲ್ ಮೋಡ್‌ನಲ್ಲಿ ಭಾಗವಹಿಸಿದರು.
ಎಲ್ಲಾ ಧರ್ಮದವರೂ ಸಮಾನ ಹಕ್ಕುಗಳೊಂದಿಗೆ ಬದುಕಬೇಕು ಎಂದು ಬಯಸುತ್ತದೆವೆ. ಬಾಂಗ್ಲಾದೇಶದ ಎಲ್ಲಾ ನಾಗರಿಕರಿಗೂ ಸಮಾನ ಹಕ್ಕುಗಳಿವೆ. ನನಗಿರುವಂತೆಯೇ ನಿಮಗೂ ಅದೇ ಹಕ್ಕುಗಳಿವೆ. “ನಿಮ್ಮನ್ನ ನೀವು ಕೀಳಾಗಿ ನೋಡಿಕೊಳ್ಳಬೇಡಿ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಎಲ್ಲರೂ ಒಂದೇ ರೀತಿಯ ಆತ್ಮಸ್ಥೈರ್ಯದಿಂದ ನಡೆದುಕೊಂಡರೆ ಯಾವುದೇ ಧರ್ಮದ ದುಷ್ಟ ಶಕ್ತಿಗಳು ದೇಶದ ಧಾರ್ಮಿಕ ಸೌಹಾರ್ದತೆ ಕದಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ನಂಬಿಕೆ, ಒಗ್ಗಟ್ಟು ಗಟ್ಟಿಯಾಗಬೇಕು ಎಂದರು. “ನಿಮ್ಮೆಲ್ಲರಿಂದ ನಾನು ಬಯಸುವುದು ಇದನ್ನೇ” ಎಂದು ಅವರು ಹೇಳಿದರು.
ಬಾಂಗ್ಲಾದೇಶದ ಒಂದು ವರ್ಗದ ಹಿಂದುಗಳ ವಿರುದ್ಧ ಪಿಎಂ ಹಸೀನಾ ಕೋಪಗೊಂಡಿದ್ದರು. “ನಾನು ಬಹಳ ವಿಷಾದದಿಂದ ಒಂದು ವಿಷಯವನ್ನು ಹೇಳುತ್ತಿದ್ದೇನೆ. ದೇಶದಲ್ಲಿ ಯಾವುದೇ ಘಟನೆ ನಡೆದಾಗ ದೇಶ-ವಿದೇಶಗಳಲ್ಲಿ ವ್ಯಾಪಕ ಪ್ರಚಾರವಾಗುತ್ತದೆ. ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಯಾವುದೇ ಹಕ್ಕು ಇಲ್ಲ ಎಂದು ದೊಡ್ಡ ಮಟ್ಟದಲ್ಲಿ ಹೇಳುತ್ತಾರೆ. ಘಟನೆ ನಡೆದ ಕೂಡಲೇ ಸರಕಾರ ಕ್ರಮ ಕೈಗೊಳ್ಳುತ್ತಿದೆ, ಕ್ರಮ ಕೈಗೊಂಡರೂ ಹಿಂದೂಗಳಿಗೆ ದೇಶದಲ್ಲಿ ಹಕ್ಕಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು. ದೇವಾಲಯಗಳ ರಕ್ಷಣೆಗಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಮುಸ್ಲಿಮರು ಸಾವನ್ನಪ್ಪಿದ್ದರು ಎಂದು ಸ್ಮರಿಸಿದರು.
ಪಶ್ಚಿಮ ಬಂಗಾಳ ಮತ್ತು ಕೋಲ್ಕತ್ತಾದಲ್ಲಿ ಸ್ಥಾಪಿಸಲಾಗಿರುವ ದುರ್ಗಾಪೂಜಾ ಮಂಟಪಗಳಿಗಿಂತ ಢಾಕಾದಲ್ಲಿ ಹೆಚ್ಚಿನ ಮಂಟಪಗಳಿವೆ ಎಂದು ಅವರು ಹೇಳಿದರು. ಬಾಂಗ್ಲಾದೇಶದಲ್ಲಿ ದುರ್ಗಾಪೂಜೆಯನ್ನು ದೊಡ್ಡ ಮಟ್ಟದಲ್ಲಿ ಆಚರಿಸಲಾಗುತ್ತದೆ ಎಂದು ಹೇಳಿದರು. ತಮ್ಮ ಸರ್ಕಾರ ಮಸೀದಿಗಳ ಆಧುನೀಕರಣ ಮತ್ತು ದುರಸ್ತಿಗೆ ಮಾತ್ರವಲ್ಲದೆ ದೇವಾಲಯಗಳು, ಚರ್ಚ್‌ಗಳು ಮತ್ತು ಮಠಗಳ ಜೀರ್ಣೋದ್ಧಾರ ಮತ್ತು ದುರಸ್ತಿಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಸರಿಯಲ್ಲ ಎಂದಿದ್ದಾರೆ.