ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ ಪ್ರಸಿದ್ದ ಸರ್ವಧರ್ಮದ ಪ್ರಮುಖ ಧಾರ್ಮಿಕ ಸ್ಥಳವಾದ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರಕ್ಕೆ, ಒಂದು ಇತಿಹಾಸವಿದ್ದು, 14-15ನೇ ಶತಮಾನದಲ್ಲಿ ಮೈಸೂರು ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಗೋಸಲ ಪೀಠದ ಶ್ರೀ ಚನ್ನಬಸವೇಶ್ವರ ಸ್ವಾಮಿಗಳವರ ಶಿಷ್ಯರಾಗಿ ಗುರುವಿನ ಅಣತೆಯಂತೆ ಲೋಕ ಸಂಚಾರ ಹೊರಟ ಶ್ರೀ ಸಿದ್ಧಲಿಂಗ ಶಿವಯೋಗಿಗಳು ಪವಾಡಗಳನ್ನು ನಡೆಸುತ್ತಾ ಹಿಮಾಚಲದಿಂದ ಕನ್ಯಾಕುಮಾರಿಯವರೆಗೆ ಶಿವ ಧರ್ಮವನ್ನು ಪ್ರಚಾರ ಮಾಡುತ್ತಾ ಭಕ್ತರ ಅಭಿಷ್ಠದಂತೆ ಕಗ್ಗೆರೆ ಕ್ಷೇತ್ರಕ್ಕೆ ದಯಮಾಡಿಸಿದರು.
ಕಗ್ಗೆರೆಯ ಭಕ್ತ ನಂಬಣ್ಣನ ಅಭೀಷ್ಠದಂತೆ ಅವನ ಮನೆಗೆ ಶಿವಪೂಜೆ ನಿಮಿತ್ತ ಒಪ್ಪದ ಕಾಲಕ್ಕೆ ಅಂದಿನ ಕಾಲದ ದರೋಡೆಕೋರರ ಗುಂಪು ಪುರಕ್ಕೆ ನುಗ್ಗಲು ಕಗ್ಗೆರೆ ಪುರ ನಿವಾಸಿಗಳು ಗುಳೇ ಹೊರಟರು, ವೀರಶೈವಧರ್ಮದಂತೆ ಬಿನ್ನಹ ಪೂರೈಸದೇ ಹೋಗಬಾರದೆಂಬ ಧರ್ಮಕ್ಕೆ ಅನುಸಾರವಾಗಿ ಭಕ್ತನನ್ನು ಕಾಯುತ್ತ ಕುಳಿತು ಶಿವಯೋಗ ಮಗ್ನರಾದರು. ಆ ಸಮಯದಲ್ಲಿ ಕಗ್ಗೆರೆಯಲ್ಲಿ ಶ್ರೀ ಸಿದ್ಧಲಿಂಗೇಶ್ವರಸ್ವಾಮಿಯವರ ಕರಸ್ಥ (ಕೈಯಲ್ಲಿರುವ) ಲಿಂಗದೊಳಗೆ ಧ್ಯಾನಸಕ್ತರಾಗಿ ಶಿವಯೋಗದಲ್ಲಿ ಮೈಮರೆತರು, ಹೀಗೆ 12 ವರ್ಷಗಳು ಕಳೆದ ನಂತರ ಶ್ರೀ ಸ್ವಾಮಿಯವರ ಸುತ್ತಾ ಹುತ್ತ ಬೆಳೆದುಕೊಂಡಿತು, ಮುಂದೆ ಒಂದು ದಿನ ನಂಬಣ್ಣನ ಮನೆಯ ಗೋವು ಹುತ್ತದ ಮೇಲೆ ಹಾಲು ಕರೆಯುವುದನ್ನು ನೋಡಿ ಆಶ್ಚರ್ಯ ಚಿಕಿತರಾಗಿ ಆ ಹುತ್ತದಲ್ಲಿ ಶ್ರೀ ಸಿದ್ಧಲಿಂಗೇಶ್ವರರ ಧ್ಯಾನಸಕ್ತರಾಗಿರುವುದನ್ನು ಜ್ಞಾನಿಗಳಿಂದ ತಿಳಿದರು. ಅವರಿಗೆ ಬೇಡತ ಧಾಳಿಯ ಪರಿಣಾಮವಾಗಿ ಸ್ವಾಮಿಯವರಿಗೆ ಬಿನ್ನಹ ಮಾಡಿಸದೇ ಇರುವುದು ಅರಿವಾಯಿತು. ಆ ನಂಬಿಯಣ್ಣ ಸಕಲ ಪರಿವಾರ ಹಾಗೂ ಮಂಗಳ ವಾದ್ಯ ಸಮೇತರಾಗಿ ತೋಟಕ್ಕೆ ಪಾಲ್ಗುಣ ಶುದ್ಧ ಸಪ್ತಮಿಯಂದು ಮಧ್ಯಾಹ್ನ 12 ಗಂಟೆಗೆ ಹುತ್ತದ ಬಳಿ ಬಂದು ಹುತ್ತದ ಮೇಲೆ 201 ಕೊಡಗಳ ಕ್ಷೀರಾಭೀಷೇಕ, ಜಲಾಭಿಷೇಕಗಳಿಂದ ಹುತ್ತವನ್ನು ಕರಗಿಸಿದರು. ಶ್ರೀ ಮನಿ||ಜ|| ಶ್ರೀ ಸಿದ್ಧಲಿಂಗೇಶ್ವರಸ್ವಾಮಿಯವರ ಅಜ್ಞಾನುಸಾರ ನಂಬಣ್ಣನವರು ಶ್ರೀ ಸ್ವಾಮಿಯವರಿಗೆ ದಾಳಿಯಾಗುವ ಮುಂಚೆ ಮಾಡಿದ ಅಡಿಗೆಯನ್ನು ಹಗೇವಿನಿಂದ ತೆಗೆಸಿ ತರಿಸಿ ನೋಡಿದಾಗ ಆಗ ತಾನೇ ತಯಾರಿಸಿದ ಅಡುಗೆ ಇದ್ದ ಹಾಗೆ ಇತ್ತು. ಅದೇ ಪ್ರಸಾದವನ್ನು ಶ್ರೀ ಸ್ವಾಮಿಯವರು ಭಕ್ತರ ಸಮೇತ ಸ್ವೀಕರಿಸಿದರು.
ತದನಂತರ ಅಂದಿನ ಕೊಡಗಿಹಳ್ಳಿ ಪುರವಾಸಿಗಳು ಶ್ರೀ ಸಿದ್ಧಲಿಂಗರಲ್ಲಿ ಪ್ರಾರ್ಥಿಸಿ ಕೊಡಗಿಹಳ್ಳಿಗೆ ದಯಮಾಡಿಸಬೇಕೆಂದು ಕೋರಿದರು. ಕೊಡಗಿಹಳ್ಳಿ ಗ್ರಾಮದ ಪಕ್ಕದಲ್ಲಿದ್ದ ಗವಿಮಠ, ಹಾಗೂ ಚಿತ್ರಮಠಕ್ಕೆ ದಯಮಾಡಿಸಿದರು. ಅಲ್ಲಿಯೇ ತಮ್ಮ ಜೊತೆಗಿದ್ದ 700 ವಿರಕ್ತ ಶಿಷ್ಯರಿಗೆ ಷಟಸ್ಥಲ ಜ್ಞಾನಸಾರಮೃತ ಬರೆದು ಬೋಧಿಸಿದರು, ಶ್ರೀ ಸಿದ್ಧಲಿಂಗೇಶ್ವರರಿಗೆ ಕೊಡಗಿಹಳ್ಳಿಯ ವೃದ್ದ ಶಿವಭಕ್ತೆಯೊಬ್ಬರು ಪ್ರತಿ ದಿನವನ್ನು ಮಡಿಯಿಂದ ಎಡೆಯನ್ನು ತಯಾರಿಸಿ ತೆಗೆದುಕೊಂಡು ಹೋಗಿ ಸಿದ್ಧಲಿಂಗೇಶ್ವರರಿಗೆ ಆರ್ಪಿಸುತ್ತಿದ್ದರು. ಹೀಗೆ ಪ್ರತಿ ದಿನ ಎಡೆಯನ್ನು ಸ್ವೀಕರಿಸುತ್ತಿದ್ದ ಸಿದ್ಧಲಿಂಗೇಶ್ವರರು ಶಿವಭಕ್ತೆಯ ಭಕ್ತಿಯ ಪ್ರತೀಕವಾಗಿ ಕೊಡಗಿಹಳ್ಳಿ ಗ್ರಾಮದ ಹೆಸರನ್ನು ಇನ್ನು ಮುಂದೆ ಎಡೆಯೂರು ಎಂದು ನಾಮಾಂಕಿಸಿದರು. ನಂತರ ತಮ್ಮ 82ನೇ ವರ್ಷದಲ್ಲಿ ಎಡೆಯೂರಿನಲ್ಲಿ ತಾವು ಪಡೆದ ಭೂಮಿಯಲ್ಲಿ ಭಕ್ತರು ಕಟ್ಟಿಸಿಕೊಟ್ಟ ಕಲ್ಲುಮಠದಲ್ಲಿ ಕ್ರಿ.ಶ. 1470 ರಲ್ಲಿ ನಿರ್ವಿಕಲ್ಪ (ಜೀವಂತ) ಶಿವಯೋಗ ಸಮಾಧಿ ಹೊಂದಿದರು, ಅಂದಿನಿಂದ ಇಂದಿನವರೆಗೆ ಶ್ರೀ ಸಿದ್ಧಲಿಂಗ ಶಿವಯೋಗಿಗಳು ಶಿವಪೂಜಾ ನಿಷ್ಟರಾಗಿ, ಅನುಷ್ಠಾನ ರೂಢರಾಗಿ ಅನೇಕ ಸಿದ್ಧ ಪುರುಷರಿಗೆ ದರ್ಶನವನ್ನು ನೀಡುತ್ತಾ ಬರುತ್ತಿರುವ ದೃಷ್ಠಾಂತಗಳನ್ನು ಸಿದ್ಧಿಪುರುಷರು ತಪಸ್ವಿಗಳು ಭಕ್ತರಿಗೆ ಪ್ರಚಾರಪಡಿಸುತ್ತಿದ್ದು, ಪ್ರತಿ ದಿನವು ರಾಜ್ಯ ಹಾಗೂ ಹೊರರಾಜ್ಯಗಳಿಂದ ಶ್ರೀ ಸಿದ್ಧಲಿಂಗೇಶ್ವರಸ್ವಾಮಿಯವರ ದರ್ಶನವನ್ನು ಪಡೆಯಲು ಸಹಸ್ರಾರು ಭಕ್ತರು ಎಡೆಯೂರಿಗೆ ಆಗಮಿಸಿ ತಮ್ಮ ಅಭೀಷ್ಠಗಳನ್ನು ಗುರುವಿನಡಿಯಲ್ಲಿ ಪ್ರಾರ್ಥಿಸುತ್ತಾ ಶುಭಫಲಗಳನ್ನು ಪಡೆಯುತ್ತಿದ್ದಾರೆ. ಇಂದಿಗೆ ಶ್ರೀ ಸಿದ್ಧಲಿಂಗರು ಎಡೆಯೂರಿನಲ್ಲಿ ನಿರ್ವಿಕಲ್ಪ ಜೀವಂತ ಸಮಾಧಿಯಾಗಿ 548 ವರ್ಷಗಳು ಕಳೆದಿವೆ ಹಾಗೂ ಎಡೆಯೂರಿಗೆ ಬರುವ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಕಲಿಯುಗದ ಕಾಮಧೇನುವೆನಿಸಿದ್ದಾರೆ
ಬಾಗಿಲು ತೆರೆಯುವ ಸಮಯ
04:30 AM IST – 12:30 PM IST
01:30 PM IST – 08:30 PM IST
ಬಾಗಿಲು ಮುಚ್ಚುವ ಸಮಯ
08:31 PM IST – 04:29 AM IST
ಪ್ರತಿದಿನ ಬೆಳಿಗ್ಗೆ 4.30 ರಿಂದ ರಾತ್ರಿ 8.30 ರವರೆಗೆ ದರ್ಶನ ಲಭ್ಯ