ದಕ್ಷಿಣ ವಲಯ ಕೌನ್ಸಿಲ್ – ನದಿ ನೀರು ಹಂಚಿಕೆ ಸಮಸ್ಯೆಗೆ ಜಂಟಿಯಾಗಿ ಪರಿಷ್ಕಾರ ಅನ್ವೇಷಿಸಿ – ಅಮಿತ್ ಶಾ
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ ಎಂಟು ವರ್ಷಗಳಲ್ಲಿ ವಲಯ ಕೌನ್ಸಿಲ್ಗಳ ಸ್ವರೂಪ ಬದಲಾಗಿದೆ ಮತ್ತು ಕೌನ್ಸಿಲ್ಗಳು ನಡೆಸುವ ಸಭೆಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಮೋದಿ ಅವರು ದಕ್ಷಿಣ ಭಾರತದೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದು, 2014ರಲ್ಲಿ ಪ್ರಧಾನಿಯಾದ ಬಳಿಕ ಕರಾವಳಿ ರಾಜ್ಯಗಳ ಅಭಿವೃದ್ಧಿಗಾಗಿ ಪ್ರಮುಖ ಬಂದರುಗಳ ಉನ್ನತೀಕರಣಕ್ಕಾಗಿ ವಿವಿಧ ಯೋಜನೆಗಳನ್ನು ಆರಂಭಿಸಲಾಗಿದೆ ಎಂದರು.
ಇಂದು ತಿರುವನಂತಪುರದಲ್ಲಿ ನಡೆದ 30ನೇ ದಕ್ಷಿಣ ವಲಯ ಕೌನ್ಸಿಲ್ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮಾತನಾಡಿದರು. 30 ನೇ ದಕ್ಷಿಣ ವಲಯ ಕೌನ್ಸಿಲ್ ಸಭೆಯಲ್ಲಿ ಒಟ್ಟು 26 ವಿಷಯಗಳ ಬಗ್ಗೆ ಚರ್ಚಿಸಲಾಯಿತು ಇದರಲ್ಲಿ 9 ಸಮಸ್ಯೆಗಳು ಇತ್ಯರ್ಥಗೊಂಡವು, 17 ವಿಷಯಗಳನ್ನು ಹೆಚ್ಚಿನ ಪರಿಗಣನೆಗೆ ಕಾಯ್ದಿರಿಸಲಾಯಿತು ಇದರಲ್ಲಿ 9 ವಿಷಯಗಳು ಆಂಧ್ರಪ್ರದೇಶದ ಮರುಸಂಘಟನೆಗೆ ಸಂಬಂಧಿಸಿವೆ.
ಗೃಹ ಸಚಿವರು ಆಂಧ್ರಪ್ರದೇಶ ಮತ್ತು ತೆಲಂಗಾಣಗಳು ತಮ್ಮ ಬಾಕಿ ಇರುವ ಸಮಸ್ಯೆಗಳನ್ನು ಪರಸ್ಪರ ಪರಿಹರಿಸಬೇಕೆಂದು ಒತ್ತಾಯಿಸಿದರು, ಇದು ಅವರ ರಾಜ್ಯಗಳ ಜನರಿಗೆ ಪ್ರಯೋಜನಕಾರಿಯಾಗುವುದಲ್ಲದೆ ಇಡೀ ದಕ್ಷಿಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ನೀರಿನ ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಜಂಟಿ ಪರಿಹಾರವನ್ನು ಅನ್ವೇಷಿಸಲು ಅವರು ದಕ್ಷಿಣ ವಲಯ ಮಂಡಳಿಯ ಎಲ್ಲಾ ರಾಜ್ಯಗಳಿಗೆ ಅಮಿತ್ ಶಾ ಕರೆ ನೀಡಿದರು.








