ಸಂಜೆಯೊಳಗೆ ತುಮಕೂರು ತಲುಪಿ, ಗಾಯಾಳುಗಳ ಆರೋಗ್ಯ ವಿಚಾರಿಸುವೆ : ಆರಗ ಜ್ಞಾನೇಂದ್ರ
ಶಿವಮೊಗ್ಗ: ನಾನು ಸಂಜೆಯೊಳಗೆ ತುಮಕೂರು ತಲುಪಿ, ಗಾಯಾಳುಗಳ ಆರೋಗ್ಯ ವಿಚಾರಿಸುವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಪಾವಗಡ ಬಳಿ ನಡೆದ ಬಸ್ ಅಪಘಾತದ ಕುರಿತು ತೀರ್ಥಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಾವಗಡ ಸಮೀಪದಲ್ಲಿ ನಡೆದ ಬಸ್ ಅಪಘಾತದಲ್ಲಿ ಬಹಳ ಮಂದಿ ಗಾಯಗೊಂಡಿದ್ದಾರೆ. ಹಲವರು ಮೃತಪಟ್ಟಿದ್ದಾರೆ ಎಂಬ ಬಗ್ಗೆ ವರದಿ ಬರುತ್ತಿದೆ. ಸುಮಾರು 8 ಮಂದಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಇದೆ. ನಾನು ಸ್ಥಳಕ್ಕೆ ಡಿಸಿ ಹಾಗೂ ಎಸ್ಪಿ ಅವರನ್ನು ಕಳುಹಿಸಿದ್ದೇನೆ.
ಸುಮಾರು 13-14 ಆ್ಯಂಬುಲೆನ್ಸ್ಗಳಲ್ಲಿ ಗಾಯಾಳುಗಳನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸೂಚನೆ ಕೊಟ್ಟಿದ್ದೇವೆ. ಈಗಾಗಲೇ ಇಡೀ ಜಿಲ್ಲಾಡಳಿತ ಸ್ಥಳದಲ್ಲಿದ್ದು, ರಕ್ಷಣಾ ಕೆಲಸ ಮಾಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವವರನ್ನು ಸಾಧ್ಯವಾದರೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.