ಕೋರ್ಟ್ ತೀರ್ಪಿನ ವಿರುದ್ಧ ಚಟುವಟಿಕೆಗಳು ನಡೆದರೆ ಕಾನೂನು ಕ್ರಮ
ಬೆಂಗಳೂರು: ಹಿಜಾಬ್ ಕುರಿತು ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಚಟುವಟಿಕೆಗಳು ನಡೆದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದೊಂದು ವಿಚಿತ್ರ ಸನ್ನಿವೇಶ. ಇವರಿಗೆ ದೇಶದ ಕಾನೂನು ಅನ್ವಯವಾಗಲ್ಲ. ಕೋರ್ಟ್ ತೀರ್ಪನ್ನೂ ಪಾಲಿಸುವುದಿಲ್ಲ. ಇದು ವಿಶೇಷ ಪ್ರಕರಣ. ಕೋರ್ಟ್ ಆದೇಶವನ್ನು ವಿರೋಧಿಸಿ ಏನಾದರೂ ಚಟುವಟಿಕೆ ನಡೆಸಿದರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಹೋಗಬಹುದು. ಅದು ಬಿಟ್ಟು ಇತರೆ ಇತರೆ ಚಟುವಟಿಕೆಯಲ್ಲಿ ತೊಡಗುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ. ಇದು ಸರಿಯಲ್ಲ. ಹಿಜಾಬ್ ವಿಷಯವನ್ನು ಬಳಸಿಕೊಂಡು ಮಕ್ಕಳಲ್ಲಿ ಮತಾಂಧತೆಯ ಬೀಜ ಬಿತ್ತುವ ಕೆಲಸವಾಗುತ್ತಿದೆ. ಇಂಥವರ ಮೇಲೆ ನಿಗಾ ವಹಿಸಿದ್ದೇವೆ ಎಂದು ಹೇಳಿದ್ದಾರೆ.
ಅಲ್ಲದೇ ಪರೀಕ್ಷೆ ಇರುವುದರಿಂದ ಮಕ್ಕಳ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಮುಖ್ಯಮಂತ್ರಿಗಳು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಸಲ ಪರೀಕ್ಷೆ ಮಾಡಲು ಆಗಲ್ಲ ಎಂದು ಸಚಿವರು ಹೇಳಿದರು.