ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಹೆತ್ತ ಮಗಳನ್ನೇ ತಂದೆ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಗೆ ಬೇಸತ್ತು ಪ್ರಿಯಕರ ಕೂಡ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಬೋಡಗುರ್ಕಿ ಗ್ರಾಮದ ಕೀರ್ತಿ(20), ಹಾಗೂ ಗಂಗಾಧರ್(24) ಸಾವನ್ನಪ್ಪಿದವರು. ಕೀರ್ತಿ ಪದವಿ ವ್ಯಾಸಂಗ ಮಾಡುತ್ತಿದ್ದಳು ಹಾಗೂ ಗಂಗಾಧರ್ ಕಲಾವಿದನಾಗಿದ್ದು, ಗಾರೆ ಕೆಲಸ ಮಾಡುತ್ತಿದ್ದ. ಕೀರ್ತಿ ತಂದೆ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಗಂಗಾಧರ್ ಹಾಗೂ ಕೀರ್ತಿ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತದ್ದರು. ಈ ಸಂದರ್ಭದಲ್ಲಿ ಈ ವಿಚಾರವನ್ನು ಕೀರ್ತಿಯ ತಂದೆಗೆ ಹೇಳಿದ್ದಾನೆ. ಆದರೆ, ಇಬ್ಬರ ಮದುವೆಗೆ ಕೀರ್ತಿಯ ತಂದೆ ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ಯುವತಿಗೆ ಕುಟುಂಬಸ್ಥರು ಬುದ್ಧಿ ಹೇಳಿದ್ದಾರೆ. ಈ ಸಂಬಂಧ ಮಂಗಳವಾರ ಬೆಳಗ್ಗೆ ಮತ್ತೆ ಕೀರ್ತಿ ಮತ್ತು ತಂದೆ ಕೃಷ್ಣಮೂರ್ತಿ ನಡುವೆ ಮಾತುಕತೆ ನಡೆದಿದೆ.ಆಗ ಕೋಪಗೊಂಡ ಕೃಷ್ಣಮೂರ್ತಿ ಮಗಳನ್ನು ಕತ್ತು ಹಿಸುಕಿ ಸಾಯಿಸಿದ್ದಾರೆ. ಈ ವಿಷಯ ಗಂಗಾಧರ್ ಕುಟುಂಬಕ್ಕೂ ತಿಳಿದಿದೆ. ಯಾವುದೇ ಸಮಸ್ಯೆಯಾಗದಂತೆ ಗಂಗಾಧರ್ ಅಣ್ಣ ಶ್ರೀನಿವಾಸ್ ಅವರನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ರೈಲ್ವೇ ಹಳಿ ಬಳಿ ಹೋಗುತ್ತಿದ್ದಾಗ ಗಂಗಾಧರ್ ನೀರು ಕುಡಿಯುತ್ತೇನೆ ಎಂದು ಹೇಳಿ ವಾಹನ ನಿಲ್ಲಿಸುವಂತೆ ಕೇಳಿದ್ದಾನೆ. ಗಾಡಿ ನಿಲ್ಲಿಸುತ್ತಿದ್ದಂತೆ ರೈಲಿನ ಮುಂದೆ ಹಾರಿ ಸಾವನ್ನಪ್ಪಿದ್ದಾನೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








