ಬೆಂಗಳೂರು, ಜೂನ್ 1: ಕೊರೋನಾ ವೈರಸ್ ಸೋಂಕಿನ ವಿರುದ್ಧದ ಹೋರಾಟಕ್ಕೆ ಸ್ಪೂರ್ತಿ ನೀಡಲು ಖ್ಯಾತ ನಿರ್ದೇಶಕ, ಸಾಹಿತಿ ಬರಗೂರು ರಾಮಚಂದ್ರಪ್ಪ , ಸಂಗೀತ ನಿರ್ದೇಶಕ ಹಂಸಲೇಖ ಸಹಯೋಗದಲ್ಲಿ ‘ಹೊಸ ಅಧ್ಯಾಯ’ ಎಂಬ ವಿಡಿಯೋ ಆಲ್ಬಮ್ ಹೊರತಂದಿದ್ದಾರೆ.
ಸಾಹಿತಿ ಬರಗೂರು ರಾಮಚಂದ್ರಪ್ಪ ಕವನದ ಸಾಲುಗಳನ್ನು ಕೊರೊನಾ ಸೋಂಕಿನಿಂದ ಜನಸಾಮಾನ್ಯರ ಬದುಕಿನಲ್ಲಿ ಆಗಿರುವ ಪರಿಣಾಮ, ಕೊರೊನಾ ಮಹಾಮಾರಿಯ ವಿರುದ್ಧ ಹೋರಾಟ ನಡೆಸಿ, ಆ ಹೋರಾಟದಲ್ಲಿ ಗೆಲುವು ಸಾಧಿಸುತ್ತೇವೆ ಎಂಬ ಭರವಸೆ ಮೂಡಿಸುವಂತೆ ರಚಿಸಿದ್ದು, ಸಂಗೀತ ನಿರ್ದೇಶಕ ಹಂಸಲೇಖ ಆ ಸಾಲುಗಳಿಗೆ ಧ್ವನಿಯನ್ನು ನೀಡಿ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ.

‘ದೇಶವಿದೇಶದ ಸಂಚಾರಿ, ಕಣ್ಣಿಗೆ ಕಾಣದ ಸಂಹಾರಿ
ಅಂಟಿದ ನಂಟನು ತಂದವನು
ಜೀವ ಜೀವನ ಕೊಂದವನು
ಕೊರೊನಾ ಕೊರೊನಾ ನಿಶ್ಚಿತ ನಿನ್ನ ಪಲಾಯನ’
ಎಂದು ಆರಂಭವಾಗುವ ಕವನದ ಸಾಲುಗಳು ಕೊರೊನಾ ವೈರಸ್ ಸೋಂಕಿನ ದಾಳಿಯಿಂದ ಆಗಿರುವ ಪರಿಣಾಮವನ್ನು ತುಂಬಾ ಚೆನ್ನಾಗಿ ತೆರೆದಿಟ್ಟಿದೆ.ಜೊತೆಗೆ ಖಂಡಿತವಾಗಿಯೂ ಅದರ ಪಲಾಯನ ನಿಶ್ಚಿತ ಎಂಬ ಭರವಸೆಯನ್ನೂ ಮೂಡಿಸುತ್ತವೆ.
ಕೊರೋನಾದಿಂದ ಲಾಕ್ ಡೌನ್ ಜಾರಿಯಾಗಿ ವಿಶ್ವವೇ ಸ್ತಬ್ಧವಾಗಿದೆ. ಜನಸಾಮಾನ್ಯರು ದುಡಿಮೆ ಇಲ್ಲದೇ ಮನೆ ಖರ್ಚು ನಿಭಾಯಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಇಂದಲ್ಲ ನಾಳೆ ಪರಿಸ್ಥಿತಿ ಸುಧಾರಿಸಿ ಸಹಜ ಸ್ಥಿತಿಗೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಜನಸಾಮಾನ್ಯರು ಕಾಯುತ್ತಿರುವ ಚಿತ್ರಣಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ.
ಸಂಕಲನದ ಕಾರ್ಯವನ್ನು ನಿರ್ದೇಶಕ ವಿಶ್ವಾಸ್ ಮಾದಿಸೆಟ್ಟಿ ನಿರ್ವಹಿಸಿದ್ದು, ಸತೀಶ್ ರಾಜೇಂದ್ರನ್ ಅವರ ಛಾಯಾಗ್ರಹಣವಿದೆ.
ಕೊರೋನಾ ಸೋಂಕಿನಿಂದ ಆಗಿರುವ ಪರಿಣಾಮಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದು, ಮುಂದೇನು ಎಂದು ಕಂಗೆಟ್ಟಿರುವ ಜನರಲ್ಲಿ ಹೊಸ ಭರವಸೆ ಮತ್ತು ಆತ್ಮವಿಶ್ವಾಸವನ್ನು ಮೂಡಿಸುತ್ತದೆ.
ಕಲಾಕ್ಷಯ ಸ್ಟುಡಿಯೋಸ್ ನ ಯೂಟ್ಯೂಬ್ ಚಾನೆಲ್ ನಲ್ಲಿ ‘ಹೊಸ ಅಧ್ಯಾಯ’ ವಿಡಿಯೋ ಆಲ್ಬಮ್ ಬಿಡುಗಡೆಯಾಗಿದೆ.








