ರಾಯಚೂರು : ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಮಧ್ಯೆ ಮಹಾ ಮಳೆಗೆ ಮಹಿಳೆ ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನ ರಾಮದುರ್ಗ ಗ್ರಾಮದಲ್ಲಿ ಮಣ್ಣಿನ ಮನೆ ಕುಸಿದು ಬಿದ್ದಿದ್ದು, 32 ವರ್ಷದ ಮಹಿಳೆ ಶಕುಂತಲಾ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾತ್ರಿ ಮನೆಯಲ್ಲಿ ಐದು ಜನ ಮಲಗಿದ್ದರು. ಈ ವೇಳೆ ಸತತ ಮಳೆಯಿಂದ ನೆನೆದಿದ್ದ ಮನೆ ಕುಸಿದಿದೆ. ಮನೆ ಕುಸಿಯುವುದನ್ನು ಕಂಡು ಮೂವರು ಮಕ್ಕಳು ಹಾಗೂ ಸಾವನ್ನಪ್ಪಿದ ಮಹಿಳೆಯ ಪತಿ ಹೊರಗಡೆ ಬಂದಿದ್ದಾರೆ. ಮಹಿಳೆಯೂ ಎದ್ದು ಬರುವಾಗ ಅಷ್ಟರಲ್ಲೇ ಮನೆ ಕುಸಿದಿದೆ. ಮಹಿಳೆಯ ಮೇಲೆ ಮನೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.








