ಸತತ ಮೂರು ಸೋಲುಗಳ ಬಳಿಕ ತವರಿನಲ್ಲಿ ಆರ್‍ಸಿಬಿ ಮೊದಲ ಗೆಲುವು ದಾಖಲಿಸಿದೆ. ರಾಜಸ್ತಾನ ರಾಯಲ್ಸ್ ತಂಡದಿಂದ ಕೊನೆ ಗಳಿಗೆಯಲ್ಲಿ ಗೆಲುವನ್ನು ಕಸಿದುಕೊಂಡ ಆರ್‍ಸಿಬಿ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದೆ.
206ರನ್‍ಗಳ ಸವಾಲನ್ನು ಬೆನ್ನಟ್ಟಿದ್ದ ರಾಜಸ್ತಾನ ರಾಯಲ್ಸ್ ತಂಡಕ್ಕೆ ಸ್ಫೋಟಕ ಆರಂಭ ನೀಡಿದ್ದು ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ.
ಬರೀ ಬೌಂಡರಿ ಮತ್ತು ಸಿಕ್ಸರ್‍ಗಳ ಮೂಲಕವೇ ಆರ್‍ಸಿಬಿ ಬೌಲರ್‍ಗಳ ನಿದ್ದೆಗೆಡಿಸಿದ್ದ ಬಿಸಿ ರಕ್ತದ ತರುಣರು ಸ್ವಲ್ಪ ತಾಳ್ಮೆಯಿಂದ ಆಡುತ್ತಿದ್ರೆ ಆರ್‍ಸಿಬಿಗೆ ಸೋಲಿನ ರುಚಿ ತೋರಿಸಬಹುದಿತ್ತು.
ಆದ್ರೆ ಆರ್‍ಸಿಬಿಯ ಅನುಭವಿ ಬೌಲರ್‍ಗಳ ಎದುರು ಜೈಸ್ವಾಲ್ ಮತ್ತು ವೈಭವ್ ಲಯ ಕಳೆದುಕೊಂಡ್ರು. ಬಿರುಸಿನ ಆಟವನ್ನೇ ಮುಂದುವರಿಸಿದ್ದ ಜೈಸ್ವಾಲ್ ಮತ್ತು ವೈಭವ್ ವಿಕೆಟ್ ಚೆಲ್ಲಿಕೊಂಡ್ರು. ಹಾಗೇ ನಿತೇಶ್ ರಾಣಾ ಕೂಡ ಸ್ಪೋಟಕ ಬ್ಯಾಟಿಂಗ್ ಮಾಡಿದ್ರೂ ಹೆಚ್ಚು ಸಮಯ ಕ್ರೀಸ್‍ನಲ್ಲಿ ನಿಲ್ಲುವಂತಹ ಮನಸು ಮಾಡಲಿಲ್ಲ.
ಈ ನಡುವೆ, ಕೃನಾಲ್ ಪಾಂಡ್ಯ ಆರ್‍ಸಿಬಿಗೆ ಬ್ರೇಕ್ ನೀಡಿದ್ರೂ ಇನ್ನೊಂದು ಕಡೆ ದ್ರುವ್ ಜುರೇಲ್ ಆರ್‍ಸಿಬಿ ಬೌಲರ್‍ಗಳಿಗೆ ಸವಾಲು ಹಾಕುವಂತೆ ಬ್ಯಾಟ್ ಬೀಸಿದ್ರು. ಅದರಲ್ಲೂ 18ನೇ ಓವರ್‍ನಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಟಾರ್ಗೆಟ್ ಮಾಡಿಕೊಂಡೇ ಬ್ಯಾಟ್ ಬೀಸಿದ್ರು. ಇನ್ನೇನು ಆರ್‍ಸಿಬಿ ಕೈಯಿಂದ ಮ್ಯಾಚ್ ಜಾರಿಕೊಳ್ಳುತ್ತೆ ಅನ್ನುವಷ್ಟರಲ್ಲಿ ಆರ್‍ಸಿಬಿ ಅಭಿಮಾನಿಗಳಿಗೆ ಜೋಶ್ ತುಂಬಿದ್ದು ಜೋಷ್ ಹ್ಯಾಜೆಲ್‍ವುಡ್. ಅಪಾಯಕಾರಿಯಾಗಿದ್ದ ದ್ರುವ್ ಜುರೇಲ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿ ಪಂದ್ಯವನ್ನು ಆರ್‍ಸಿಬಿ ಪರ ವಾಲುವಂತೆ ಮಾಡಿದ್ರು. ಅಂತಿಮವಾಗಿ ಜೋಷ್ ಹ್ಯಾಜೆಲ್‍ವುಡ್ 4 ವಿಕೆಟ್ ಹಾಗೂ ಕೃನಾಲ್ ಪಾಂಡ್ಯ 2 ವಿಕೆಟ್ ಉರುಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದಕ್ಕು ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆರ್‍ಸಿಬಿ 5 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತ್ತು. ಆರ್‍ಸಿಬಿಯ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಆಕರ್ಷಕ 70 ರನ್ ದಾಖಲಿಸಿ ಆರ್‍ಸಿಬಿ ಅಭಿಮಾನಿಗಳ ಮನ ತಣಿಸಿದ್ರು. ಹಾಗೇ ಕನ್ನಡಿಗ ದೇವದತ್ತ ಪಡಿಕ್ಕಲ್ ಮಿಂಚಿನ 50 ರನ್ ಸಿಡಿಸಿ ಆರ್‍ಸಿಬಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು. ಕೊನೆ ಕ್ಷಣದಲ್ಲಿ ಜಿತೇಶ್ ಶರ್ಮಾ ಸ್ಪೋಟಕ 20 ರನ್ ದಾಖಲಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದ್ರು.
ಒಟ್ಟಾರೆ, ರಾಜಸ್ತಾನ ರಾಯಲ್ಸ್ ಅನುಭವದ ಕೊರತೆಯಿಂದ ಗೆಲ್ಲುವ ಪಂದ್ಯವನ್ನು ಸೋಲಬೇಕಾಯ್ತು. ಆರ್‍ಸಿಬಿಗೆ ಅನುಭವವೇ ಜಯದ ಹಾದಿಯನ್ನು ತೋರಿಸಿತ್ತು.








