ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 17 ಆರೋಪಿಗಳು ಜೈಲು ಪಾಲಾಗಿದ್ದಾರೆ. ಪ್ರಕರಣದ ತನಿಖೆಯನ್ನು ಬಹುತೇಕ ಮುಗಿಸಿರುವ ಪೊಲೀಸರು ಕೂಡ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಕೊಲೆಯ ಹಿಂದಿನ ಸತ್ಯ ಬಹಿರಂಗವಾಗುತ್ತಿವೆ.
ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ (Post Mortem Report) ರೇಣುಕಾಸ್ವಾಮಿ ಕೊಲೆಯ ಹಿಂದಿನ ರಹಸ್ಯ ಬಯಲಾಗಿದೆ. ತೀವ್ರ ಆಘಾತ ಹಾಗೂ ಅತಿಯಾದ ರಕ್ತಸ್ರಾವದಿಂದ ಆತ ಸಾವನ್ನಪ್ಪಿದ್ದಾನೆ ಎಂದು ಉಲ್ಲೇಖವಾಗಿದೆ ಎನ್ನಲಾಗಿದೆ. ಆರೋಪಿಗಳು ಚಿತ್ರಹಿಂಸೆ ನೀಡಿರುವುದು ಕೂಡ ಸಾಬೀತಾಗಿದೆ. ಎದೆಯ ಪಕ್ಕೆಲಬು ಮುರಿದಿದೆ. ಬಡಿಗೆ ಸೇರಿದಂತೆ ಕಾಲಿನಿಂದ ಒದ್ದಿದ್ದಾರೆ ಎಂದು ಕೂಡ ತಿಳಿದು ಬಂದಿದೆ. ತಲೆ ಸೇರಿ ದೇಹದ ಹಲವೆಡೆ ಆಳವಾದ, ಸೀಳಿದ ಗಾಯಗಳಾಗಿವೆ.
ತಲೆ, ಕುತ್ತಿಗೆ, ಕಿವಿ, ಕಣ್ಣಿನ ಭಾಗ, ಕೆನ್ನೆಯ ಬಲಭಾಗದಲ್ಲಿ ಗಾಯಗಳಾಗಿವೆ. ಎದೆ, 2 ಭುಜ, ಬೆನ್ನು, ಹೊಟ್ಟೆ, ವೃಷಣ ಭಾಗಕ್ಕೂ ಆರೋಪಿಗಳು ಹೊಡೆದಿದ್ದಾರೆ. ಕೈಗಳಿಗೆ ಸುಟ್ಟ ಗಾಯಗಳಾಗಿವೆ. ಮೊಣಕಾಲು, ಹಿಮ್ಮಡಿ, ಕೈ ಬೆರಳು, ಕಾಲ್ಬೆರಳುಗಳಿಗೂ ಗಾಯಗಳಾಗಿದ್ದು, ಬಹುತೇಕ ದೇಹದ ಭಾಗಗಳಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.