ವಾಷಿಂಗ್ಟನ್, ಜೂನ್ 7 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಹಾಗೂ ಚೀನಾ ರಾಷ್ಟ್ರಗಳಲ್ಲಿ ಹೆಚ್ಚು ಕೊರೋನಾ ವೈರಸ್ ಸೋಂಕಿನ ಪರೀಕ್ಷೆಗಳನ್ನು ನಡೆಸಿದಿದ್ದರೆ, ಅಮೆರಿಕಾಗಿಂತಲೂ ಅಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು ಎಂದು ಹೇಳಿದ್ದಾರೆ.
ಕೊರೋನಾ ಪ್ರಕರಣಗಳು ಅಮೆರಿಕದಲ್ಲಿ ಹೆಚ್ಚುತ್ತಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಅಮೆರಿಕದಲ್ಲಿ ಇಲ್ಲಿಯವರೆಗೆ 20 ದಶ ಲಕ್ಷಕ್ಕೂ ಹೆಚ್ಚು ಕೊರೊನಾ ಪರೀಕ್ಷೆಗಳು ನಡೆದಿವೆ. ಭಾರತ ಹಾಗೂ ಚೀನಾದಲ್ಲಿ ಎಷ್ಟು ಕೊರೊನಾ ಪರೀಕ್ಷೆ ನಡೆದಿದೆ ಎಂದು ಪ್ರಶ್ನಿಸಿದ ಅವರು ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸಿದಾಗ ಹೆಚ್ಚೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತದೆ ಎಂಬುವುದು ನಿಮಗೆ ತಿಳಿದಿರಲಿ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ನಮ್ಮ ಆರೋಗ್ಯ ಸಿಬ್ಬಂದಿಗಳು ಹೆಚ್ಚು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಭಾರತ ಹಾಗೂ ಚೀನಾದಲ್ಲಿ ಕೂಡ ಹೆಚ್ಚು ಪರೀಕ್ಷೆಗಳನ್ನು ನಡೆಸಿದರೆ, ಅಮೆರಿಕಾಗಿಂತಲೂ ಹೆಚ್ಚಿನ ಪ್ರಕರಣಗಳು ಅಲ್ಲಿ ದಾಖಲಾಗುತ್ತವೆ ಎಂಬುದಕ್ಕೆ ನಾನು ಭರವಸೆ ಕೊಡುತ್ತೇನೆ ಎಂದು ಹೇಳಿದ ಟ್ರಂಪ್ ನಾವು ಕೊರೋನಾಗೆ ಸಂಬಂಧಿಸಿದಂತೆ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಿದ್ದೇವೆಂದು ಹೇಳಿಕೊಂಡಿದ್ದಾರೆ.
ಪ್ಯೂರಿಟನ್ ವೈದ್ಯಕೀಯ ಉತ್ಪನ್ನಗಳು ಕುರಿತು ಮಾತನಾಡಿದ ಟ್ರಂಪ್ ನಮ್ಮ ರಾಷ್ಟ್ರ ಹೊಸದಾಗಿ ಪುನರಾರಂಭಗೊಳ್ಳುತ್ತಿದೆ. ಅದಕ್ಕಾಗಿ ಪ್ಯೂರಿಟನ್ ಪರೀಕ್ಷಾ ಸಾಮರ್ಥ್ಯಕ್ಕೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಯಾರು ಎಣಿಸದ ರೀತಿಯಲ್ಲಿ ಅಮೆರಿಕದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ ಎಂದು ತಿಳಿಸಿದ್ದಾರೆ.








