ಬೆಂಗಳೂರು: ನಮ್ಮದು ಡಬಲ್ ಎಂಜಿನ್ ಸರ್ಕಾರ ಎನ್ನುವ ಬಿಜೆಪಿಗರು ಎಷ್ಟು ಮನೆ ಕಟ್ಟಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರಶ್ನೆ ಮಾಡಿದ್ದಾರೆ. ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ಹಾನಿಯಾಗಿದೆ. ಆದರೆ ರಾಜ್ಯ, ಕೇಂದ್ರ ಸರ್ಕಾರಗಳು ಯಾವುದೇ ಪರಿಹಾರ ಕ್ರಮ ಕೈಗೊಳ್ಳದೆ ವಿಫಲವಾಗಿವೆ ಎಂದು ಕಿಡಿಕಾರಿದ್ದಾರೆ.
![]()
ರಾಜ್ಯ ಈ ಬಾರಿಯೂ ನೆರೆ ಹಾವಳಿಗೆ ತುತ್ತಾಗಿ 680 ಹಳ್ಳಿಗಳು, 56 ತಾಲೂಕುಗಳು ತತ್ತರಿಸಿವೆ. 80 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. 3500 ಕಿ.ಮೀ. ರಸ್ತೆ ಹಾಳಾಗಿ, 395 ಕಟ್ಟಡ, 250 ಸೇತುವೆಗಳು ಪ್ರವಾಹಕ್ಕೆ ಕುಸಿದಿವೆ. ಬಿಜೆಪಿಯವರು ನಮ್ಮದು ಡಬಲ್ ಎಂಜಿನ್ ಸರ್ಕಾರ ಎಂದು ಹೇಳುತ್ತಾರೆ. ಇಲ್ಲಿಯವರೆಗೆ ಎಷ್ಟು ಮನೆ ಕಟ್ಟಿದ್ದಾರೆ, ಎಷ್ಟು ರಸ್ತೆ, ಸೇತುವೆಗಳನ್ನ ಸರಿಪಡಿಸಿದ್ದಾರೆ ಎಂದು ಪ್ರಶ್ನಿಸಿದರು.
ಕಳೆದ ವರ್ಷ ಸಹ ನೆರೆ ಬಂದಾಗ ಕನಿಷ್ಠ ಸೌಜನ್ಯಕ್ಕೂ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿರಲಿಲ್ಲ ಎಂದು ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.









