ಪ್ರತಿಭೆ..ಸಾಮರ್ಥ್ಯ..ನಂಬಿಕೆ.. ನಿರೀಕ್ಷೆ..ಭರವಸೆ..ಒತ್ತಡ..ಸಾಧನೆ..ಯಶಸ್ಸು..ಇದನ್ನೆಲ್ಲಾ ಬ್ಯಾಲೆನ್ಸ್ ಮಾಡಿಕೊಂಡು ಮುನ್ನಡೆದಾಗ ಮಾತ್ರ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು. ಪ್ರತಿಯೊಬ್ಬರಲ್ಲೂ ಒಂದಲ್ಲ ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಹಾಗಂತ ಪ್ರತಿಭೆ ಇದ್ರೆ ಮಾತ್ರ ಸಾಲಲ್ಲ. ಅದಕ್ಕೆ ತಕ್ಕಂತೆ ನಮ್ಮಲ್ಲಿರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಅದಕ್ಕೆ ಬೇಕಾಗಿರೋದು ನಂಬಿಕೆ. ನಮ್ಮ ಪ್ರತಿಭೆ, ಸಾಮರ್ಥ್ಯದ ಮೇಲೆ ನಂಬಿಕೆಯನ್ನಿಟ್ಟುಕೊಂಡಾಗ ಸಹಜವಾಗಿಯೇ ಭರವಸೆಗಳ ಬೆಳಕು ಮೂಡುತ್ತದೆ. ಹಾಗೇ ನಿರೀಕ್ಷೆಗಳ ಭಾರವೂ ಹೆಚ್ಚಾಗುತ್ತದೆ. ಆಗಲೇ ಎದುರಾಗೋದು ನಿಜವಾದ ಅಗ್ನಿಪರೀಕ್ಷೆ. ಎಲ್ಲರೂ ನಮ್ಮ ಪ್ರತಿಭೆ, ಸಾಮರ್ಥ್ಯದ ಮೇಲೆ ನಂಬಿಕೆ, ನಿರೀಕ್ಷೆ, ಭರವಸೆಗಳನ್ನು ಇಟ್ಟುಕೊಂಡಾಗ ಅದಕ್ಕೆ ತಕ್ಕಂತೆ ಮುನ್ನಡೆಯುವಾಗ ನಮ್ಮನ್ನು ಕಾಡುವುದೇ ಒತ್ತಡ. ಈ ಒತ್ತಡ ಯಾರನ್ನೂ ಬಿಡಲ್ಲ. ಆದ್ರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡವನ್ನು ನಿಭಾಯಿಸುವ ಕಲೆಯನ್ನು ಅರಿತುಕೊಂಡಾಗ ಮಾತ್ರ ಸಾಧನೆಯ ಹಾದಿಯಲ್ಲಿ ಸಾಗಬಹುದು. ಆಗ ಯಶಸ್ಸು ಪಡೆಯಬಹುದು.
ಹೌದು, ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ತೆಂಡುಲ್ಕರ್ ಈ ಸೂತ್ರವನ್ನು ಅಳವಡಿಸಿಕೊಂಡಿದ್ದಾರೆ. ಅದಕ್ಕಾಗಿ ವಿಶ್ವದ ಎವರ್ ಗ್ರೀನ್ ಕ್ರಿಕೆಟಿಗನಾಗಿ ರೂಪುಗೊಂಡಿದ್ದು. ನಿಜ, ಸಚಿನ್‍ನಲ್ಲಿ ಕ್ರಿಕೆಟ್ ಪ್ರತಿಭೆ ಇತ್ತು. ಅದನ್ನು ಮೊದಲು ಗುರುತಿಸಿದ್ದು ಅಣ್ಣ ಅಜಿತ್ ತೆಂಡುಲ್ಕರ್. ನಂತರ ಗುರು ರಮಕಾಂತ್ ಅಚ್ರೇಕರ್, ಸಚಿನ್ ಪ್ರತಿಭೆಯ ಸಾಮರ್ಥ್ಯವನ್ನು ಬೆಳೆಸಿದ್ರು. ಅಷ್ಟೇ ಅಲ್ಲ ಸಚಿನ್‍ಗೆ ತನ್ನ ಪ್ರತಿಭೆ ಮತ್ತು ಸಾಮರ್ಥ್ಯದ ಮೇಲೆ ನಂಬಿಕೆ ಹುಟ್ಟುವಂತೆ ಮಾಡಿದ್ರು. ಆಗ ಸಚಿನ್‍ಗೂ ತನ್ನ ಮೇಲೆ ಭರವಸೆಯ ಬೆಳಕು ಮೂಡಿತ್ತು. ತಾನು ಅಂದುಕೊಂಡಿದ್ದನ್ನು ಸಾಧಿಸಲು ಹೊರಟಾಗ ನಿರೀಕ್ಷೆಗಳು ಹೆಚ್ಚಾದವು. ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗಳನ್ನು ಈಡೇರಿಸುವ ಭರಾಟೆಯಲ್ಲಿ ಅವರನ್ನು ಕಾಡಿದ್ದು ಒತ್ತಡ. ಪ್ರತಿ ದಿನ, ಪ್ರತಿ ಪಂದ್ಯ ಸಚಿನ್‍ಗೆ ಅದು ದೈನಂದಿನ ದಿನಚರಿ. ತರಬೇತಿ, ಗೇಮ್ ಪ್ಲಾನ್ ಎಲ್ಲವೂ ಆಟದ ಒಂದು ಭಾಗ. ಆದ್ರೆ ಸಚಿನ್ ಅವರ ಇಡೀ ಕ್ರಿಕೆಟ್ ಬದುಕಿನಲ್ಲಿ ಕೋಟಿ ಕೋಟಿ ಭಾರತೀಯರ ನಿರೀಕ್ಷೆಗಳ ಭಾರ.. ಗೆಲುವಿನ ದಾಹ. ಇದನ್ನು ಈಡೇರಿಸಲು ಹೈವೋಲ್ಟೇಜ್ ಪವರ್ ಅನ್ನು ಸಹಿಸಿಕೊಳ್ಳುವ ವೈಯರ್ ನಂತೆ ಸಚಿನ್ ದೇಹವನ್ನು ಆವರಿಸಿಕೊಂಡಿದ್ದು ಕೂಡ ಒತ್ತಡವೇ.
ಒಂದಂತೂ ಸತ್ಯ.. ಸಚಿನ್ ಮಾತ್ರವಲ್ಲ. ಪ್ರತಿಯೊಬ್ಬ ಆಟಗಾರರು ಒತ್ತಡದಲ್ಲೇ ಆಡ್ತಾರೆ. ಅದು ಕೂಡ ಭಾರತೀಯ ಕ್ರಿಕೆಟ್ ಆಟಗಾರರಿಗೆ ಒತ್ತಡ ಅನ್ನೋದು ದೊಡ್ಡ ಶಾಪವಾಗಿ ಕಾಡುತ್ತಲೇ ಇರುತ್ತದೆ. ಇದರಲ್ಲಿ ಹೆಚ್ಚು ಒತ್ತಡಕ್ಕೆ ಸಿಲುಕಿದವರು ಸಚಿನ್ ತೆಂಡುಲ್ಕರ್. ಈ ಒತ್ತಡ ಎಂಬ ಶಾಪದಿಂದ ಹೊರಬರಲು ತೆಂಡುಲ್ಕರ್ ಮಾನಸಿಕವಾಗಿ ಮತ್ತು ದೈಹಿಕವಾಗಿ ತಯಾರಿ ಮಾಡಿಕೊಂಡು ಆಡುತ್ತಿದ್ದರು. ಹೀಗಾಗಿಯೇ ಸಾಧನೆಗಳ ಶಿಖರವೇರಿ, ಯಶಸ್ಸಿನ ಉತ್ತುಂಗಕ್ಕೇರಿದ್ದು.
ಹೀಗಾಗಿ ಸಚಿನ್ ಈ ಸೂತ್ರಗಳನ್ನು ಮುಂದಿಟ್ಟುಕೊಂಡು ಯುವ ಕ್ರಿಕೆಟಿಗರಿಗೆ ಸಲಹೆ ನೀಡಿದ್ದಾರೆ. ಒಬ್ಬ ಆಟಗಾರ ಬೆಳೆಯಬೇಕಾದ್ರೆ ಹಲವು ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು. ನಿಮ್ಮಲ್ಲಿ ಎಷ್ಟೇ, ಪ್ರತಿಭೆ, ಸಾಮರ್ಥ್ಯಗಳು ಇದ್ರೂ ಅದನ್ನು ಸರಿಯಾದ ಸಮಯದಲ್ಲಿ ಬಳಸಿಕೊಳ್ಳಬೇಕು. ಯಾಕಂದ್ರೆ ಅವಕಾಶಗಳು ಯಾವಾಗಲೂ ಬರಲ್ಲ. ಬಂದಾಗ ಅದನ್ನು ಎರಡೂ ಕೈಯಿಂದ ಬಾಚಿಕೊಳ್ಳಬೇಕು
ನಿಮ್ಮ ಮೇಲೆ ನಿರೀಕ್ಷೆ, ನಂಬಿಕೆ, ಭರವಸೆಗಳು ಮೂಡಿದ್ರೆ ಅದಕ್ಕಾಗಿ ನೀವು ಯಾವ ತ್ಯಾಗಕ್ಕೂ ಸಿದ್ಧವಾಗಿರಬೇಕು. ನಿಮ್ಮಲ್ಲಿ ಪ್ರತಿಭೆ ಇದ್ರೆ ನಿಮ್ಮ ಮೇಲೆ ನಿರೀಕ್ಷೆ ಹೆಚ್ಚಾಗುತ್ತದೆ. ನಿಮ್ಮಲ್ಲಿ ಸಾಮರ್ಥ್ಯವಿದ್ರೆ ನಂಬಿಕೆ ಜಾಸ್ತಿ ಬರುತ್ತೆ. ಆಗ ನಿಮ್ಮ ಮೇಲೆ ಭರವಸೆಗಳ ಬೆಳಕು ಮೂಡುತ್ತದೆ. ಅದಕ್ಕೆ ತಕ್ಕಂತೆ ಪೂರ್ವ ತಯಾರಿ ಮಾಡಬೇಕಾಗುತ್ತದೆ. ಕೇವಲ ಕೋಚ್ ಹೇಳಿದಂತೆ ಅಭ್ಯಾಸ ಮಾಡುವುದಲ್ಲ. ಪ್ರತಿ ಪಂದ್ಯ, ಪ್ರತಿ ಸರಣಿಗೆ ನಮ್ಮ ಪೂರ್ವ ತಯಾರಿ ಮಾಡಿಕೊಂಡು ನಮ್ಮದೇ ತಂತ್ರಗಳನ್ನು ರೂಪಿಸಿಕೊಳ್ಳಬೇಕು. ಹಾಗೇ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ಕಠಿಣ ಪರಿಶ್ರಮದ ಜೊತೆಗೆ ನೀವು ನಿರ್ದಿಷ್ಟವಾದ ಯೋಜನೆ ಹಾಕಿಕೊಳ್ಳಬೇಕು. ಶಿಸ್ತು, ಬದ್ಧತೆ ಹಾಗೂ ಸರಿಯಾದ ಮಾರ್ಗದರ್ಶನದಿಂದ ಅದನ್ನು ಕಾರ್ಯರೂಪಗೊಳಿಸಬಹುದು. ಹೀಗೆ ಮಾಡುವುದರಿಂದ ಆಟಗಾರ ಉತ್ತಮ ಪ್ರದರ್ಶನ ನೀಡಲು ಸಾಧ್ಯ ಎಂಬುದು ಸಚಿನ್ ಯುವ ಆಟಗಾರರಿಗೆ ನೀಡುವ ಭೋದನೆ.
ಸಚಿನ್ ಈ ರೀತಿ ಹೇಳುವುದಕ್ಕೂ ಕಾರಣವಿದೆ. ಇದು ಅವರ ಅನುಭವದ ಪಾಠ. ಯಾಕಂದ್ರೆ ಸಚಿನ್ ಯುಗದಲ್ಲಿ ಘಾತಕ ವೇಗಿಗಳಿದ್ರು. ಚತುರ ಸ್ಪಿನ್ನರ್ ಗಳಿದ್ರು. ಚಕ್ರವ್ಯೂಹದಂತೆ ಕಟ್ಟಿಹಾಕೋ ಎದುರಾಳಿ ನಾಯಕರಿದ್ದರು. ಇದನ್ನೆಲ್ಲಾ ದಾಟಿಯೇ ಸಚಿನ್ ಮೇರು ಕ್ರಿಕೆಟಿಗನಾಗಿ ರೂಪುಗೊಂಡಿದ್ದು.
ಅಷ್ಟಕ್ಕೂ ಸಚಿನ್ ಕ್ರಿಕೆಟ್ ಪಿಚ್ ಮೇಲೆ ರಕ್ತ ಸುರಿಸಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪ್ರವೇಶಿಸಿದ್ದು. ಪಾಕ್‍ನ ಘಾತಕ ಬೌಲರ್ ವಕಾರ್ ಯೂನಸ್ ಎಸೆತದಲ್ಲಿ ದವಡೆಗೆ ಪೆಟ್ಟು ತಿಂದು ರಕ್ತ ಸುರಿಸಿ ಆಡಿದ್ದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ವಾಸಿಂ ಅಕ್ರಂ, ವಕಾರ್ ಯೂನಸ್, ಅಬ್ದುಲ್ ಖಾದರ್, ಕಟ್ರ್ನಿ ವಾಲ್ಶ್, ಆಲನ್ ಡೊನಾಲ್ಡ್, ಚಾಮಿಂಡಾ ವಾಸ್, ಎಂಬ್ರೋಸ್, ಮೆಕ್‍ಗ್ರಾಥ್, ಬ್ರೆಟ್ ಲೀ, ಶೋಯಿಬ್ ಆಖ್ತರ್, ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಸಕ್ಲೇನ್ ಮುಸ್ತಾಕ್ ಹೀಗೆ ಘಟಾನುಘಟಿ ಬೌಲರ್ ಗಳ ಎದುರು ರನ್ ಗಳಿಸೋದು, ಶತಕದ ಮಹಾ ಶತಕ ದಾಖಲಿಸೋದು ಅಂದ್ರೆ ಅಂದ್ರೆ ಸುಮ್ಮನೆ ಮಾತಾನಾಡಿದಷ್ಟು ಸುಲಭವಲ್ಲ.
ಸನತ್ ರೈ








