ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದ ಬೆನ್ನಲ್ಲೇ ಶಾಲಾ-ಕಾಲೇಜು ಪ್ರಾರಂಭ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಸಲಹೆ, ಅಭಿಪ್ರಾಯಗಳನ್ನು ನೀಡುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
ಎಲ್‍ಕೆಜಿಯಿಂದ ಕಾಲೇಜುವರೆಗೆ ಶಾಲೆಗಳನ್ನು ಯಾವಾಗ ಆರಂಭಿಸಬಹುದು, ಒಂದು ವೇಳೆ ತರಗತಿಗಳನ್ನು ಆರಂಭಿಸುವುದೇ ಆದರೆ ಯಾವಾಗ ತರಗತಿಗಳನ್ನು ಮೊದಲು ಪ್ರಾರಂಭ ಮಾಡಬಹುದು, ಸಾರ್ವಜನಿಕರು, ಜನಪ್ರತಿನಿಧಿಗಳಿಂದ ಶಿಕ್ಷಣ ಇಲಾಖೆ ಯಾವ ರೀತಿಯ ಸಹಕಾರ ನಿರೀಕ್ಷೆ ಮಾಡಬಹಬಹುದು ಎಂಬುದರ ಬಗ್ಗೆ ಸಚಿವ ಸಂಪುಟದ ಎಲ್ಲಾ ಸಚಿವರು ಹಾಗು ಶಾಸಕರು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗದ ಹರಡುವಿಕೆ ದಿನದಿಂದ ದಿನಕ್ಕೆ ತೀವ್ರವಾಗುತ್ತಲೇ ಇದೆ. ಈ ಪರಿಸ್ಥಿತಿಯ ನಡುವೆ ಸಾಮಾಜಿಕ ಜೀವನವು ತಹಬದಿಗೆ ಮರಳಬೇಕಿದೆ. ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ವಾಣಿಜ್ಯವೂ ಸೇರಿದಂತೆ ಎಲ್ಲ ಸಾಮಾಜಿಕ ಚಟುವಟಿಕೆಗಳು ಮುಂದುವರೆಯುವ ನಿಟ್ಟಿನಲ್ಲಿ ಸರ್ಕಾರವು ಕಾಲಕಾಲಕ್ಕೆ ಅವಶ್ಯ ನೀತಿ-ನಿರ್ದೇಶನಗಳನ್ನು ಅನುಷ್ಠಾನಗೊಳಿಸುತ್ತಿದೆ. ಆದರೂ ಜನ ಸಾಮಾನ್ಯರ ಸಹಕಾರ ನಿರೀಕ್ಷಿತ ಮಟ್ಟದಲ್ಲಿಲ್ಲದ ಕಾರಣ ಕೊರೊನಾ ನಿಯಂತ್ರಣಕ್ಕೆ ಸಮಯ ತೆಗೆದುಕೊಳ್ಳುತ್ತಿದೆ.

ಜೂನ್‍ನಲ್ಲಿಯೇ ಪ್ರಾರಂಭವಾಗಬೇಕಿದ್ದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಪ್ರಾರಂಭಗೊಂಡಿಲ್ಲ. ಶಾಸಗಿ ಶಾಲೆಗಳು ಆನ್‍ಲೈನ್ ಮೂಲಕ ಶಿಕ್ಷಣ ನೀಡುವ ಕೆಲಸ ಮಾಡುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಗಮ, ದೂರದರ್ಶನದ ಸೇತುಬಂಧ ಮೂಲಕ ಪಾಠ ಪ್ರವಚನ ಮಾಡಲಾಗುತ್ತಿದೆ.
ಆದರೆ, ಯಾವುದೇ ಬೋಧನಾ ಕ್ರಮಗಳು ತರಗತಿ ಕಲಿಕೆಗೆ ಪರ್ಯಾಯವಲ್ಲ. ತರಗತಿಯಲ್ಲಿ ಪಾಠ, ಬಯಲಿನಲ್ಲಿ ಆಟವಾಡುವ ಕಲಿಕೆಯ ಪ್ರಯೋಜನ ಆನ್‍ಲೈನ್ ಶಿಕ್ಷಣದಿಂದ ಬರುವುದಿಲ್ಲ. ಹೀಗಾಗಿ ಯಾವುದಾದರೂ ಒಂದು ರೀತಿಯಲ್ಲಿ ಮಕ್ಕಳನ್ನು ಶಾಲಾ ಆವರಣಕ್ಕೆ ಕರೆ ತರಬೇಕಾದ ಅನಿವಾರ್ಯತೆ ಇದೆ. ಹೀಗಾಗಿ..
1. ನಮ್ಮ ರಾಜ್ಯದಲ್ಲಿ ಶಾಲೆಗಳನ್ನು ಅಂದರೆ ಎಲ್‍ಕೆಜಿಯಿಂದ ಪಿಯುಸಿವರೆಗೆ ಯಾವಾಗ ಪ್ರಾರಂಭಿಸಬಹುದು ?
2. ಒಂದು ವೇಳೆ ಶಾಲಾರಂಭ ಮಾಡಿದಲ್ಲಿ ಯಾವ ತರಗತಿಗಳನ್ನು ಮೊದಲು ಪ್ರಾರಂಭಿಸಬಹುದು ?
3. ಸಮುದಾಯ ಹಾಗೂ ಜನಪ್ರತಿನಿಗಳಿಂದ ಶಿಕ್ಷಣ ಇಲಾಖೆ ಯಾವ ರೀತಿಯ ಸಹಕಾರ ನಿರೀಕ್ಷಿಸಬಹುದು ಎಂಬುದರ ಬಗ್ಗೆ ಸಲಹೆ ಸೂಚನೆಗಳನ್ನು ಪತ್ರ ಇಲ್ಲವೇ ಇ-ಮೇಲ್ ಮುಖೇನ ತಿಳಿಸುವಂತೆ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.








