ಬೆಂಗಳೂರು : ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮೇಲಾದ ಹಲ್ಲೆಯನ್ನು ನವರಸ ನಾಯಕ ಜಗ್ಗೇಶ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಕೆಲವರು ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಲ್ಲೆಯ ವಿಡಿಯೋ ಜಗ್ಗೇಶ್ ಗಮನಕ್ಕೆ ಬಂದಿದ್ದು, ಹುಚ್ಚ ವೆಂಕಟ್ ಪರಿಸ್ಥಿತಿ ಕಂಡು ಮರುಗಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಹುಚ್ಚ ವೆಂಕಟ್ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡು ಚಿಕಿತ್ಸೆಯ ಅಗತ್ಯವಿದೆ ಎಂದಿದ್ದಾರೆ.
ಜಗ್ಗೇಶ್ ಟ್ವೀಟ್ ನಲ್ಲಿ..
‘ವಿಡಿಯೋ ನೋಡಿ ತುಂಬಾ ದುಃಖವಾಯಿತು. ಸೆಲ್ಫಿ ಪ್ರಚಾರಕ್ಕಾಗಿ ಈ ರೀತಿ ಹಲ್ಲೆ ನಡೆಸೋದು ಎಷ್ಟು ಸರಿ? ಹುಚ್ಚ ವೆಂಕಟ್ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರೋ ಮನೋರೋಗಿ ಎಂದು ಇಡೀ ಕರ್ನಾಟಕಕ್ಕೆ ತಿಳಿದಿದೆ. ಸಾಧ್ಯವಾದ್ರೆ ಸಹಾಯ ಮಾಡಿ, ಇಲ್ಲವಾದ್ರೆ ಪೊಲೀಸರಿಗೆ ಮಾಹಿತಿ ನೀಡಿ. ಹೀಗೆ ಮೃಗೀಯವಾಗಿ ಕೈ ಮಾಡಿ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿ ಆನಂದಿಸದಿರಿ. ಇದು ಬುದ್ಧಿ ಇರೋ ಮನುಜರ ಲಕ್ಷಣವಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗೇ ಹಲ್ಲೆ ಮಾಡಿದವರನ್ನು ಜಗ್ಗಣ್ಣ ಪ್ರಶ್ನಿಸಿದ್ದು, ‘ನಿಮ್ಮ ಮನೆಯಲ್ಲಿ ಒಬ್ಬ ಅಣ್ಣ, ತಮ್ಮ ಅಥವಾ ತಂದೆ ವೆಂಕಟ್ ರೀತಿ ಮಾನಸಿಕ ರೋಗಿ ಆಗಿದ್ದರೆ ಅವರ ಮೇಲೆ ಕೈ ಮಾಡಿದ್ರೆ ನೋವು ಆಗುತ್ತೆ ಅಲ್ವಾ..? ನನಗೂ ಒಬ್ಬ ಜಗವರಿಯದ ದೇವರ ಮಗ ತಮ್ಮನಿದ್ದಾನೆ. 55 ವರ್ಷದಿಂದ ಅವನನ್ನು ಮಗುವಂತೆ ಸಾಕುತ್ತಿದ್ದೇವೆ. ವೆಂಕಟ್ ಬಂಧುಗಳೇ ಸ್ವಾರ್ಥಬಿಟ್ಟು ಸಹಾಯ ಮಾಡಿ ಎಂದು ಟ್ವಿಟ್ಟರ್ ನಲ್ಲಿ ಕೇಳಿಕೊಂಡಿದ್ದಾರೆ.
ಮಾನಸಿಕ ಅಸ್ವಸ್ಥನಾಗಿರೋ ನಟ ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆಸಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿ ವಿಕೃತಿ ಮೆರೆದಿದ್ದಾರೆ. ದಯಮಾಡಿ ಸಂಬಂಧ ಆರಕ್ಷಕ ಠಾಣೆ ಇದು ನನ್ನ ದೂರು ಎಂದು ಭಾವಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಕರ್ನಾಟಕ ಹಾಗೂ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿ ಜಗ್ಗೇಶ್ ವಿನಂತಿಸಿಕೊಂಡಿದ್ದಾರೆ.
ಇನ್ನು ‘ಒಬ್ಬ ನಟ ಸತ್ತಾಗ ಮರುಗದಿರಿ. ಬದುಕಿದ್ದಾಗ ಆತನ ಕೈ ಹಿಡಿದು ಸಹಾಯ ಮಾಡಿ. ಯಾಕೋ ಇಂದು ತುಂಬ ದುಃಖಿತನಾದೆ. ಇಷ್ಟೇನಾ ಪ್ರಾಪಂಚಿಕ ನಾಟಕೀಯ ನಡಾವಳಿ ಅನ್ನಿಸತೊಡಗಿದೆ. ದಯಮಾಡಿ ಬದುಕಿರುವ ಕಲಾವಿದನ ಪರವಾಗಿ ನಿಂತು ಸಹಾಯ ಮಾಡಿ. ಮಾನಸಿಕ ಅಸ್ವಸ್ಥನ ಮೇಲೆ ಕೈ ಮಾಡಿಸೋದನ್ನು ಕೊನೆ ಮಾಡಿಸಿ’ ಎಂದು ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.








