ಬೆಂಗಳೂರು : ರಾಜ್ಯದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇಂದ ನಡೆದಿದೆ. ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹಮದ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕಾಂಗ್ರೆಸ್ ನ ನಾಯಕರಾದ ಡಾ. ಜಿ. ಪರಮೇಶ್ವರ, ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ, ರಮೇಶ್ ಕುಮಾರ್, ಕೆ.ಜೆ. ಜಾರ್ಜ್, ಎಂ.ಬಿ.ಪಾಟೀಲ ಅವರು ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ,
ಪ್ರಧಾನಿಯವರು ಏಕಮುಖವಾಗಿ ನಿರ್ದಾರಗಳನ್ನು ಕೈಗೊಳ್ಳುತ್ತಾರೆ. ಯಾರ ಜೊತೆಗೂ ಅವರು ಚರ್ಚೆ ಮಾಡುವುದಿಲ್ಲ. ಪ್ರತಿಪಕ್ಷಗಳ ಜೊತೆ ಅವರು ಚರ್ಚೆ ನಡೆಸುವುದಿಲ್ಲ. ಹೀಗಾಗಿ ಕೊರೊನಾ ಸೋಂಕು ವ್ಯಾಪಕವಾಗಿದ್ದು ದೇಶದ ಆರ್ಥಿಕ ಪರಿಸ್ಥಿತಿ ಪಾತಾಳ ತಲುಪಿದೆ. ನಿರುದ್ಯೋಗ ಪ್ರಮಾಣ ಭಾರಿ ಹೆಚ್ಚಾಗಿದೆ. ಸಂಘಟಿತ, ಅಸಂಘಟಿತ ವಲಯದ ಕಾರ್ಮಿಕರು, ರೈತರು ಕಾಯಕ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಮುಂಜಾಗ್ರತಾ ಕ್ರಮಗಳ ಕೊರತೆ ಇದಕ್ಕೆಲ್ಲ ಕಾರಣ.
ವಿಮಾನಗಳ ಹಾರಾಟ ಮೊದಲೇ ರದ್ದು ಮಾಡಿದ್ದರೆ ಸೋಂಕು ಭಾರಿ ಪ್ರಮಾಣದಲ್ಲಿ ಹಬ್ಬುತ್ತಿರಲಿಲ್ಲ. ಈಗ ತಪ್ಪು ಮುಚ್ವಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ.ನರೇಗಾಗೆ ಹೆಚ್ಚಿನ ಹಣ ನೀಡುವುದಾಗಿ ಹೇಳಿರುವುದನ್ನು ಹೊರತುಪಡಿಸಿದರೆ ಕೇಂದ್ರ ಸರ್ಕಾರದ ಪ್ಯಾಕೇಜ್ ನಿಂದ ಏನೂ ಅನುಕೂಲವಿಲ್ಲ. ಆರ್ಥಿಕ ತಜ್ಞರೇ ಈ ಮಾತು ಹೇಳುತ್ತಿದ್ದಾರೆ. ನಾವು ನೀಡಿದ ಸಲಹೆ, ಸೂಚನೆಗಳಿಗೆ, ಮಂಡಿಸಿದ ಬೇಡಿಕೆಗಳಿಗೆ ರಾಜ್ಯ ಸರ್ಕಾರವೂ ಸ್ಪಂದಿಸಿಲ್ಲ. ಹಣ್ಣು, ತರಕಾರಿ, ದಿನಸಿ ಕಿಟ್ ಗಳನ್ನು ವಿತರಿಸುವ ಮೂಲಕ ಕಷ್ಟ ಕಾಲದಲ್ಲಿ ಜನರಿಗೆ ಸಹಾಯ ಮಾಡಿದ ಪಕ್ಷದ ಎಲ್ಲ ಶಾಸಕರಿಗೆ ಅಭಿನಂದನೆಗಳು. ಕೊರೊನಾ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ಥಿತಿ ನಿಭಾಯಿಸುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದ್ದರೂ ಈ ವರೆಗೆ ಯಾರಿಗೂ ಹಣ ಬಂದಿಲ್ಲ. ಪ್ಯಾಕೇಜ್ ಹೆಸರಲ್ಲಿ ಪ್ರಧಾನಿ ಹಾಗೂ ಸಿಎಂ ಬುರುಡೆ ಬಿಡುತ್ತಿದ್ದಾರೆ. ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ.
ಈ ಎಲ್ಲ ವಿಚಾರಗಳನ್ನು ಶಾಸಕರು ಜನತೆಯ ಮುಂದೆ ಇಡಬೇಕು. ಪಂಚಾಯಿತಿಗಳಿಗೆ ಚುನಾವಣೆ ನಡೆಸದೆ ಬಿಜೆಪಿ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುವ ಹುನ್ನಾರ ನಡೆದಿದೆ. ಈಗಿರುವ ಸದಸ್ಯರನ್ನು ಮುಂದುವರಿಸಿ ಆರು ತಿಂಗಳ ಬಳಿಕ ಚುನಾವಣೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು. ರಾಜ್ಯದಲ್ಲಿ ತೊಘಲಕ್ ದರ್ಬಾರ್ ನಡೆಯುತ್ತಿದೆ. ಭ್ರಷ್ಟಾಚಾರ ನಡೆದಿದೆ. ನಮ್ಮ ಸರ್ಕಾರವನ್ನು ಹತ್ತು ಪರ್ಸೆಂಟ್ ಸರ್ಕಾರ ಎಂದು ಮೋದಿಯವರು ಟೀಕಿಸಿದ್ದರು. ಯಡಿಯೂರಪ್ಪ ಅವರ ಸರ್ಕಾರ ಎಷ್ಟು ಪರ್ಸೆಂಟ್ ಸರ್ಕಾರ ಎಂಬುದನ್ನು ಮೋದಿಯವರು ಹೇಳಬೇಕು. ಎಪಿಎಂಸಿ ಕಾಯಿದೆಗೆ ತಿದ್ದುಪಡಿ, ಪಂಚಾಯಿತಿಗಳಿಗೆ ನಾಮನಿರ್ದೇಶನ, ಕಾರ್ಮಿಕ ಕಾಯಿದೆಗೆ ತಿದ್ದುಪಡಿ
ಸೇರಿದಂತೆ ಸರ್ಕಾರದ ವಿವಿಧ ಕ್ರಮಗಳನ್ನು ಖಂಡಿಸಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು. ಹೋರಾಟ ನಾಳೆಯಿಂದಲೇ ಆರಂಭ. ನಾಳೆ ಸರ್ಕಾರದ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುವುದು. ಬಳಿಕ ತಾಲೂಕು, ಜಿಲ್ಲಾ ಮಟ್ಟದಲ್ಲಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.








