ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಧಾನಸಭೆ- ವಿಧಾನಪರಿಷತ್‍ನ ಸಭಾಂಗಣ ಹಾಗೂ ಮೊಗಸಾಲೆಗಳಿಗೆ ವೈರಾಣು ನಿರೋಧಕವನ್ನು ಸಿಂಪಡಣೆ ಮಾಡಲಾಗಿದೆ.
ವಿಧಾನಸೌಧದ ನೌಕರರ ಮೇಲೂ ನಿಗಾ ಇಡಲಾಗಿದೆ. ನಿನ್ನೆಯಿಂದಲೇ ವಿಧಾನಸಭೆ ಕಾರ್ಯಕಲಾಪಗಳನ್ನು ವೀಕ್ಷಿಸಲು ಆಗಮಿಸುತ್ತಿದ್ದ ಸಾರ್ವಜನಿಕರ ಭೇಟಿಗೆ ನಿಷೇಧಿಸಲಾಗಿದೆ. ವಿಧಾನಸಭೆಯ ಮೊಗಸಾಲೆ, ಸಭಾಂಗಣ, ಶಾಸಕರು ಬಳಸುವ ಮೈಕ್, ಮೇಜುಗಳಿಗೆ ವೈರಸ್ ನಿರೋಧಕವನ್ನು ಸಿಂಪಡಿಸಿ ಶುಚಿಗೊಳಿಸಲಾಗಿದೆ. ಅಲ್ಲದೆ ಬಾಗಿಲುಗಳು, ಕಿಟಕಿ, ಚಿಲಕಗಳು, ಗೋಡೆಗಳಿಗೂ ನಿರೋಧಕವನ್ನು ಸಿಂಪಡಿಸಲಾಗಿದೆ. ಇನ್ನೂ ವಿಧಾನಸೌಧಕ್ಕೆ ಆಗಮಿಸುವ ಶಾಸಕರನ್ನು, ನೌಕರರನ್ನು, ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇಂದು ಬೆಳಿಗ್ಗೆ ವಿಧಾನಸೌಧಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಕೊರೊನಾ ಪರೀಕ್ಷೆಗೆ ಒಳಪಟ್ಟರು. ಈ ವೇಳೆ ಶಾಸಕ ಜಮೀರ್ ಅಹ್ಮದ್ ಇದ್ದರು.









