ಕೊವಾಕ್ಸಿನ್ ನ ಮಾನವ ಕ್ಲಿನಿಕಲ್ ಪ್ರಯೋಗ – ಮೊದಲ ಹಂತ ಯಶಸ್ವಿ
ಹೊಸದಿಲ್ಲಿ, ಜುಲೈ 26: ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಕೋವಿಡ್ -19 ಲಸಿಕೆಯಾದ ಕೊವಾಕ್ಸಿನ್ ನ ಮಾನವ ಕ್ಲಿನಿಕಲ್ ಪ್ರಯೋಗದ ಮೊದಲ ಹಂತದಲ್ಲಿ ಪ್ರೋತ್ಸಾಹದಾಯಕ ಫಲಿತಾಂಶ ಕಂಡುಬಂದಿದೆ ಎಂದು ಲಸಿಕೆ ಪ್ರಯೋಗ ತಂಡದ ಪ್ರಧಾನ ಅನ್ವೇಷಕರು ತಿಳಿಸಿದ್ದಾರೆ.
ಮೊದಲ ಹಂತದ ಮಾನವ ಕ್ಲಿನಿಕಲ್ ಪ್ರಯೋಗದಲ್ಲಿ ದೇಶದಾದ್ಯಂತ 50 ಜನರಿಗೆ ಕೊವಾಕ್ಸಿನ್ ಲಸಿಕೆಯನ್ನು ನೀಡಲಾಗಿದ್ದು, ಪ್ರೋತ್ಸಾಹದಾಯಕ ಫಲಿತಾಂಶ ಕಂಡುಬಂದಿದೆ. ಶನಿವಾರ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ಆರು ಜನರಿಗೆ ಲಸಿಕೆ ನೀಡಲಾಗಿದ್ದು ಎಲ್ಲಾ ಹಂತದಲ್ಲೂ ಯಶಸ್ವಿಯಾಗಿ ಕೊವಾಕ್ಸಿನ್ ಲಸಿಕೆ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಲಸಿಕೆ ಪ್ರಯೋಗ ತಂಡದ ಪ್ರಧಾನ ಅನ್ವೇಷಕರಾದ ಡಾ. ಸವೀತಾ ವರ್ಮಾ ತಿಳಿಸಿದ್ದಾರೆ.
ಜುಲೈ 24 ರಂದು ಏಮ್ಸ್ ನಲ್ಲಿ ಮೊದಲಿಗೆ 30 ವರ್ಷದ ಯುವಕನಿಗೆ ಕೋವಿಡ್ -19 ಲಸಿಕೆಯಾದ ಕೊವಾಕ್ಸಿನ್ ಅನ್ನು ನೀಡಲಾಯಿತು.
ಐಸಿಎಂಆರ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವಾಕ್ಸಿನ್, ಇತ್ತೀಚೆಗೆ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ನಿಂದ ಮಾನವ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮೋದನೆ ಪಡೆದಿದೆ.
ಮೊದಲ ಹಂತದಲ್ಲಿ, ಲಸಿಕೆಯನ್ನು 375 ಸ್ವಯಂಸೇವಕರ ಮೇಲೆ ಪರೀಕ್ಷಿಸಲಾಗಿದ್ದು, ಅವರಲ್ಲಿ 100 ಮಂದಿ ಏಮ್ಸ್ ನಿಂದ ಬಂದವರಾಗಿದ್ದಾರೆ.
ಮಾನವ ಕ್ಲಿನಿಕಲ್ ಪ್ರಯೋಗದ ಮೊದಲ ಹಂತದಲ್ಲಿ 18 ರಿಂದ 55 ವರ್ಷ ವಯಸ್ಸಿನ ಆರೋಗ್ಯವಂತ ಜನರ ಮೇಲೆ ನಡೆಸಲಾಗಿದೆ. ಎರಡನೇ ಹಂತದಲ್ಲಿ 750 ಜನರ ಮೇಲೆ ಲಸಿಕೆ ಪ್ರಯೋಗ ಮಾಡಲಾಗುವುದು ಮತ್ತು ಅವರು 12 ರಿಂದ 65 ವರ್ಷ ವಯಸ್ಸಿನವರಾಗುತ್ತಾರೆ.