ವಿಧಾನ ಪರಿಷತ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವ ಸಾಧ್ಯತೆ ಕುರಿತು ಬಿಜೆಪಿ ಸದಸ್ಯರು ಹಾಸ್ಯ ಚಟಾಕಿಗಳನ್ನು ಹಾರಿಸಿದ ಘಟನೆ ನಡೆದಿದೆ.
ಬೆಂಗಳೂರು ಕಸ ವಿಲೇವಾರಿ ಸಮಸ್ಯೆ ಕುರಿತ ಚರ್ಚೆ ನಡೆಯುತ್ತಿದ್ದಾಗ, ಡಿಕೆಶಿ ಉತ್ತರಿಸುತ್ತಿದ್ದ ಸಂದರ್ಭ, ಕೆಲ ತಾಂತ್ರಿಕ ಅಂಶಗಳನ್ನು ಅರಿಯಬೇಕಾಗಿದೆ, ನಾನು ಸೋಮವಾರ ಇದರ ಬಗ್ಗೆ ವಿವರವಾಗಿ ಸ್ಪಷ್ಟನೆ ನೀಡುತ್ತೇನೆ ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ, ಮುಖದಲ್ಲಿ ಲವಲವಿಕೆ ಇದೆ… ತುಂಬಾ ಪ್ರಸನ್ನರಾಗಿದ್ದೀರಿ.. ಏನಾದ್ರೂ ಶುಭ ಸುದ್ದಿ ಇದೆಯಾ? ನಮ್ಮೊಂದಿಗೂ ಸಿಹಿ ಸುದ್ದಿ ಹಂಚಿಕೊಳ್ಳಿ ಎಂದು ತಮಾಷೆ ಮಾಡಿದರು.
ಬಿಜೆಪಿ ಸದಸ್ಯ ರವಿಕುಮಾರ್ ಸಹ ಇದಕ್ಕೆ ಧ್ವನಿಗೂಡಿಸಿ,
ನಿನ್ನೆ ಬೇರೆ ಎಲ್ಲರಿಗೂ ಡಿನ್ನರ್ ಪಾರ್ಟಿ ಆಯೋಜನೆ ಮಾಡಿದ್ದೀರಿ. ಗುಡ್ ನ್ಯೂಸ್ ಏನಾದ್ರೂ ಇದೆಯಾ? ಬಹುಶಃ ಎಲ್ಲರಿಗೂ ಊಟ ಹಾಕಿಸುವಂತೆ ನೀವು ಕಾಣುತ್ತಿದ್ದೀರಿ ಬಿಡಿ ಎಂದು ವ್ಯಂಗ್ಯಪ್ರಹಾರ ಮಾಡಿದರು.
ಇದಕ್ಕೆ ಡಿಕೆಶಿ ನಾಜೂಕಾದ ಉತ್ತರ ನೀಡಿದರು:
ಹಾಗೇನಿಲ್ಲ.. ನೀವು ಬರೋದಾದರೆ ಎಲ್ಲರಿಗೂ ಊಟಕ್ಕೆ ಕರೆಯುತ್ತಿದ್ದೆ. ಎಲ್ಲರನ್ನ ಸಂತೋಷ ಪಡಿಸಿದರೆ, ನಾನೂ ಸಂತೋಷವಾಗುತ್ತೇನೆ. ಆ ಪ್ರಯತ್ನದಲ್ಲಿ ನಾನು ಇದ್ದೀನಿ ಎಂದು ನಗುತ್ತಲೇ ಶ್ಲೋಕವನ್ನು ಉಲ್ಲೇಖಿಸಿ ಉತ್ತರಿಸಿದರು.
ಬಿಜೆಪಿ ಸದಸ್ಯರ ಈ ಹಾಸ್ಯ ಪ್ರಹಸನ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಸಿಎಂ ಹುದ್ದೆ ಹಂಚಿಕೆ ವಿಚಾರ ಮತ್ತಷ್ಟು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ.