ಉತ್ತರಪ್ರದೇಶ : ಕೊರೊನಾ ವೈರಸ್ ಗೆ ಹೆದರಿ ರೂಮಿನೊಳಗೆ ಬರಲು ಹೆಂಡತಿ ನಿರಾಕರಿಸಿದ್ದಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಜೋನ್ ಪುರದಲ್ಲಿ ನಡೆದಿದೆ. ಜಯಕುಮಾರ್ ಮೌರ್ಯ ಮೃತ ವ್ಯಕ್ತಿಯಾಗಿದ್ದಾನೆ.
ಏನಿದು ಘಟನೆ..
ಕಳೆದ ನಾಲ್ಕು ದಿನಗಳ ಹಿಂದೆ ಮುಂಬೈನಿಂದ ಜಯಕುಮಾರ್ ಮೌರ್ಯ ಊರಿಗೆ ಬಂದಿದ್ದ. ಹೀಗಾಗಿ ಆತನನ್ನು ಅಲ್ಲಿನ ಅಧಿಕಾರಿಗಳು ಮನೆಯಲ್ಲೇ ಕ್ವಾರಂಟೈನ್ ಮಾಡಿದ್ದರು. ಹೆಂಡತಿ ಕೂಡ ಊಟ, ತಿಂಡಿಯನ್ನೆಲ್ಲಾ ಆತನಿದ್ದ ರೂಮಿಗೆ ತಂದುಕೊಡುತ್ತಿದ್ದಳು. ಕೊಠಡಿಯಲ್ಲಿದ್ದ ಕಿಟಕಿಯ ಮೂಲಕ ಊಟ, ತಿಂಡಿಯನ್ನು ನೀಡ್ತಿದ್ದ ಪತ್ನಿ ಅಲ್ಲಿಯೇ ತನ್ನ ಗಂಡನ ಜೊತೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದಳು.
ಈ ನಡುವೆ ಹೆಂಡತಿಯನ್ನು ಜಯಕುಮಾರ್ ರೂಮಿನೊಳಗೆ ಬರುವಂತೆ ಕರೆದಿದ್ದಾನೆ. ಆದರೆ ಹೆಂಡತಿಗೆ ಕೊರೊನಾಗೆ ಹೆದರಿ ರೊಮಿನೊಳಗೆ ಹೋಗಲು ನಿರಾಕರಿಸಿದ್ದಾಳೆ. ನೀವು ಕ್ವಾರಂಟೈನ್ ನಲ್ಲಿದ್ದೀರಾ, ಒಂದು ಸಲ ಪರೀಕ್ಷೆಯ ವರದಿ ಬಂದು ಬಿಡಲಿ, ಅಲ್ಲಿವರೆಗೂ ಕಿಟಕಿ ಮೂಲಕವೇ ನನ್ನ ನಿಮ್ಮ ಭೇಟಿ ಅಂದಿದ್ದಾಳೆ.
ಇದಕ್ಕೆ ಬೇಸರಗೊಂಡ ಜಯಕುಮಾರ್ ಹಲವು ಬಾರಿ ಪತ್ನಿಗೆ ರೂಮಿನೊಳಗೆ ಬರುವಂತೆ ಕೋರಿಕೊಂಡಿದ್ದಾನೆ. ಕೊನೆಗೆ ಆಕೆಯೊಂದಿಗೆ ಇದೇ ವಿಷಯಕ್ಕೆ ಜಗಳ ತೆಗೆದಿದ್ದಾನೆ. ಆದರೂ ಆಕೆ ರೂಮಿನೊಳಗೆ ಹೋಗಲು ಸುತಾರಾಂ ಒಪ್ಪಿಲ್ಲ. ವಿಷಯ ತಾರಕಕ್ಕೆ ಹೋದ ಬೆನ್ನಲ್ಲೆ ಬೇಸತ್ತ ಪತಿ ಜಯಕುಮಾರ್, ಮನೆ ಹತ್ತಿರವಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.








