ಹೈದ್ರಬಾದ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ರದ್ದುಗೊಳಿಸಿದ್ದ ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ
ಕೊರೋನಾ ವೈರಸ್ ನಿಂದಾಗಿ ಹೈದ್ರಬಾದ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ರದ್ದುಗೊಂಡಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಹೇಳಿದೆ. ಈ ಹಿಂದೆ ನಿಗದಿಯಾಗಿದ್ದಂತೆ ಹೈದ್ರಬಾದ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯು ಆಗಸ್ಟ್ 11ರಿಂದ 16ರವರೆಗೆ ನಡೆಯಬೇಕಿತ್ತು, ಆದ್ರೆ ಕೋವಿಡ್-19 ಅಟ್ಟಹಾಸ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಹೈದ್ರಬಾದ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯನ್ನು ರದ್ದು ಮಾಡಿರುವ ನಿರ್ಧಾರಕ್ಕೆ ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು ಸಹಮತ ಸೂಚಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಟೂರ್ನಿಯನ್ನು ಸಂಘಟಿಸಲು ಸಾಧ್ಯವಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ ಸ್ಪಷ್ಟಪಡಿಸಿದೆ.
ಆಗಸ್ಟ್ ನಲ್ಲಿ ಹೈದ್ರಬಾದ್ ಓಪನ್ ಟೂರ್ನಿಯನ್ನು ನಡೆಸುವುದು ಕಷ್ಟ. ಸದ್ಯ ಹೈದ್ರಬಾದ್ ಮತ್ತು ತೆಲಂಗಾನದಲ್ಲಿ ಲಾಕ್ ಡೌನ್ ಮುಂದುವರಿದಿದೆ. ಇಂತಹ ಸನ್ನಿವೇಶದಲ್ಲಿ ಟೂರ್ನಿಯನ್ನು ನಡೆಸುವುದು ಅಸಾಧ್ಯ. ಅದೂ ಅಲ್ಲದೆ ಆಟಗಾರರಿಗೆ ತರಬೇತಿ ಶಿಬಿರದಲ್ಲಿ ಭಾಗಿಯಾಗಲು ಸಾಧ್ಯವಾಗತ್ತಿಲ್ಲ. ನಾವು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ನಿರ್ಧಾರವನ್ನು ಎದುರು ನೋಡುತ್ತಿದ್ದೇವೆ ಎಂದು ಬ್ಯಾಡ್ಮಿಂಟನ್ ತರಬೇತುದಾರ ಪುಲ್ಲೇಲ ಗೋಪಿಚಂದ್ ಹೇಳಿದ್ದಾರೆ.
ಹಾಗಂತ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಕೇವಲ ಹೈದ್ರಬಾದ್ ಓಪನ್ ಟೂರ್ನಿಯನ್ನು ಮಾತ್ರ ರದ್ದುಗೊಳಿಸಿಲ್ಲ. ಹೈದ್ರಬಾದ್ ಓಪನ್ ಟೂರ್ನಿ ಸೇರಿದಂತೆ ಆಸ್ಟ್ರೇಲಿಯ ಓಪನ್ ಮತ್ತು ಕೊರಿಯಾ ಮಾಸ್ಟರ್ಸ್ ಟೂರ್ನಿಯನ್ನು ಕೂಡ ರದ್ದುಗೊಳಿಸಿದೆ. ಆದ್ರೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್‍ನ ಈ ನಿರ್ಧಾರದಿಂದ 2020ರ ವೇಳಾಪಟ್ಟಿಗೆ ಹೆಚ್ಚಿನ ರೀತಿಯ ತೊಂದರೆಯಾಗುವುದಿಲ್ಲ. ಆದ್ರೆ ಈ ವೇಳಾಪಟ್ಟಿಗೆ ಭಾರತೀಯ ಬ್ಯಾಡ್ಮಿಂಟನ್ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರತಿ ವಾರ ಒಂದೊಂದು ಟೂನಿ9ಯನ್ನು ಆಡಬೇಕಾಗಿರುವುದರಿಂದ ಗಾಯದ ಸಮಸ್ಯೆ ಮತ್ತು ಪ್ರಯಾಣದ ಸಮಸ್ಯೆ ಉಂಟಾಗುತ್ತದೆ ಎಂದಿದ್ದರು.








